ಸಾಮೂಹಿಕ ರಾಜಿನಾಮೆ, ವೈದ್ಯರ ಬೆದರಿಕೆ
ಕನ್ನಡಪ್ರಭ ವಾರ್ತೆ ಹಾಸನ ಜು. 30
ಆರೋಗ್ಯ ಇಲಾಖೆಯಲ್ಲಿ ಶೇ.30 ರಷ್ಟು ವೈದ್ಯರ ಹುದ್ದೆಯನ್ನು ಕಡಿತಗೊಳಿಸುವುದ್ದಕ್ಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮುಂದಾಗಿದ್ದು, ಕೂಡಲೇ ಆದೇಶ ವಾಪಸ್ ಪಡೆಯಬೇಕು. ಇಲ್ಲವಾದಲ್ಲಿ ವೈದ್ಯರು ಸಾಮೂಹಿಕವಾಗಿ ರಾಜಿನಾಮೆ ನೀಡುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಎಚ್ಚರಿಕೆ ನೀಡಿದೆ.
ನಗರದಲ್ಲಿ ಬುಧವಾರ ಸಂಘದ ಕಾರ್ಯಾಧ್ಯಕ್ಷ ಡಾ.ಎಚ್.ಆರ್.ತಿಮ್ಮಯ್ಯ ಮಾತನಾಡಿ, ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆಯ ಸಮಸ್ಯೆಗಳನ್ನು 2009-10ರಲ್ಲಿ ಸರ್ಕಾರವು ಗಂಭೀರವಾಗಿ ಪರಿಗಣಿಸಿ ಕೆಲ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿತ್ತು. ಆದರೆ ಈಗ ಇರುವ ಸಮಸ್ಯೆಗಳ ಬಗ್ಗೆ ಗಮನ ನೀಡದೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತಷ್ಟು ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ವೈದ್ಯರ ಕೊರತೆ: ಈಗಾಗಲೇ ಶೇ.60ರಷ್ಟು ತಜ್ಞ ವೈದ್ಯರ ಹುದ್ದೆಗಳು ಆರೋಗ್ಯ ಇಲಾಖೆಯಲ್ಲಿ ಖಾಲಿ ಇದ್ದರು ಸಹ ಕಾರ್ಯದರ್ಶಿಗಳು ವೈದ್ಯರ ಹುದ್ದೆಯನ್ನು ಕಡಿತಗೊಳಿಸಲು ಮುಂದಾಗಿದ್ದಾರೆ. ದೇಶದಲ್ಲಿ ಆರೋಗ್ಯ ಸುರಕ್ಷಿತ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಈ ಕಾಯ್ದೆಯನ್ನು ಜಿಲ್ಲಾ ಮಟ್ಟದಲ್ಲಿ ವಸ್ತುನಿಷ್ಟವಾಗಿ ಜಾರಿಗೆ ತರುವ ದೃಷ್ಟಿಯಿಂದ ಪ್ರತಿ ಜಿಲ್ಲೆಗಳಲ್ಲಿ ಅಂಕಿತ ಅಧಿಕಾರಿಗಳನ್ನು ನೇಮಕ ಮಾಡಬೇಕಿದೆ ಎಂದರು.
ಅಂಕಿತ ಅಧಿಕಾರಿ: ಈ ಹುದ್ದೆಯು ದೇಶದ 20 ಕ್ಕೂ ಮಿಗಿಲಾದ ರಾಜ್ಯಗಳಲ್ಲಿ ವೈದ್ಯಾಧಿಕಾರಿಗಳ ಹುದ್ದೆಯಾಗಿರುತ್ತದೆ. ಇದನ್ನು ಮಾನದಂಡವಾಗಿ ಇಟ್ಟುಕೊಂಡು ನಮ್ಮ ರಾಜ್ಯದಲ್ಲಿ ವೈದ್ಯಾಧಿಕಾರಿಗಳನ್ನೇ ಈ ಹುದ್ದೆಗಳಿಗೆ ಮಾಚ್ 2014ರಲ್ಲಿ ನೇಮಕ ಮಾಡಿ ಆದೇಶಿಸಿದ್ದಾರೆ. ಆದರೆ ಏಕಾಏಕಿ ಈ ಹುದ್ದೆಗಳಿಂದ ವೈದ್ಯರನ್ನು ತೆಗೆದು ಹಾಕಿದ್ದಾರೆ ಎಂದು ಕಿಡಿಕಾರಿದರು.
ವೈದ್ಯರ ಹುದ್ದೆಗಳನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಇಂತಹ ತೀರ್ಮಾನ ಕೈಗೊಳ್ಳುತ್ತಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ತಕ್ಷಣವೇ ವರ್ಗಾಯಿಸಬೇಕು. ಕಾರ್ಯತತ್ಪರರಾಗಿರುವ ಮತ್ತು ವೃತ್ತಿಯಲ್ಲಿ ವೈದ್ಯರಾಗಿರುವ ಹಿರಿಯ ಐಎಎಸ್ ಅಧಿಕಾರಿಗಳನ್ನು ಇಲಾಖೆಗೆ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಐಎಎಸ್, ಕೆಎಎಸ್ ಬೇಡ: ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಔಷಧಿಗಳನ್ನು ತೀರ್ಮಾನಿಸುವ ಹಾಗೂ ಖರೀದಿಸುವ ವಿಚಾರದಲ್ಲಿ ಪ್ರಮುಖ ತೀರ್ಮಾನ ಕೈಗೊಳ್ಳುವ ಆಯಾಕಟ್ಟಿನ ಸ್ಥಳಗಳಲ್ಲಿ ಐಎಎಸ್, ಕೆಎಎಸ್ ಅಧಿಕಾರಿಗಳಿದ್ದು, ಅವರ ಬದಲಿಗೆ ನಮ್ಮ ಇಲಾಖೆಯ ದಕ್ಷ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು ಎಂದರು.
ಪ್ರಧಾನ ಕಾರ್ಯದರ್ಶಿಗಳು ಜು.18, 2014ರಂದು ಹೊರಡಿಸಿರುವ ಆದೇಶವನ್ನು ತಕ್ಷಣವೇ ರದ್ದುಗೊಳಿಸಬೇಕು. ಆಹಾರ ಸುರಕ್ಷತಾ ಕಾಯ್ದೆಯ ವ್ಯಾಪ್ತಿಯಲ್ಲಿ ಬರುವ ಅಂಕಿತ ಅಧಿಕಾರಿಗಳ ಹುದ್ದೆಗಳಿಗೆ ವೈದ್ಯಾಧಿಕಾರಿಗಳನ್ನೇ ನೇಮಕ ಮಾಡಬೇಕು. ತಮಿಳುನಾಡು ಮಾದರಿಯಲ್ಲಿ ಆರೋಗ್ಯ ಇಲಾಖೆಯನ್ನು ಪುನರ್ ಸಂಘಟಿಸಿ, ಕನಿಷ್ಠ 500 ಪಿಎಚ್ಸಿಗಳನ್ನು ಕಡಿತಗೊಳಿಸಬೇಕು ಎಂದರು.
ಸಾಮೂಹಿಕ ರಾಜಿನಾಮೆ: ತಕ್ಷಣವೇ ಆರೋಗ್ಯ ಇಲಾಖೆಯ ನೇಮಕಾತಿ ಪ್ರಕ್ರಿಯೆಗೆ ಕ್ರಮಕೈಗೊಳ್ಳಬೇಕು. ಆದ್ದರಿಂದ ನಮ್ಮ ಇತರೆ ಬೇಡಿಕೆಗಳನ್ನು ಸರ್ಕಾರ ಆ.15ರೊಳಗೆ ಈಡೇರಿಸಬೇಕು. ಇಲ್ಲವಾದಲ್ಲಿ ಸೆ.15ರಂದು ವೈದ್ಯರೆಲ್ಲ ಸೇರಿ ಮುಖ್ಯಮಂತ್ರಿಗಳ ಮನೆ ಮುಂದೆ ಸಾಮೂಹಿಕವಾಗಿ ರಾಜಿನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ.ಬಿ.ಕೆ.ವಿಜೇಂದ್ರ, ಡಾ.ಸತೀಶ್ ಕುಮಾರ್, ಡಾ.ಸಂಧ್ಯಾ ಹಾಗೂ ಇತರರು ಇದ್ದರು.