ಟೆಕ್ಕಿಗಳು ಬರುವುದು ಸ್ವಲ್ಪತಡವಾಗಿದ್ದರೆ ಹೆಲಿಕಾಫ್ಟರ್ ತರಿಸಲಾಗುತ್ತಿತ್ತು: ಡಿಸಿ
ಹಾಸನ: ಪಶ್ಚಿಮಘಟ್ಟದ ಕಾಡುಗಳಿಗೆ ಟ್ರಕ್ಕಿಂಗ್‌ಗೆ ತೆರಳಿದ ಯುವಕರ ತಂಡ ನಾಪತ್ತೆ ಪ್ರಕರಣ ಸಾಕಷ್ಟು ಪೇಚಿಗೆ ಸಿಲುಕಿಸಿತ್ತು. ಒಂದೆರಡು ಗಂಟೆ ತಡವಾಗಿದ್ದರೆ ಹೆಲಿಕಾಫ್ಟರ್ ಕೂಡ ಕರೆಸಲು ಚಿಂತಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಹೇಳಿದ್ದಾರೆ.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ವತಿಯಿಂದ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಗುರುವಾರ ನಡೆದ ವಿಪತ್ತು ನಿರ್ವಹಣಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರ ಪ್ರಾಣವೂ ಮುಖ್ಯ. ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅದಕ್ಕಾಗಿ ಸರ್ಕಾರ ಎಲ್ಲಾ ಶ್ರಮವನ್ನು ಹಾಕುತ್ತಿದೆ. ಸಾರ್ವಜನಿಕರೂ ಆಡಳಿತದೊಂದಿಗೆ ಸಹಕರಿಸಬೇಕಾಗುತ್ತದೆ ಎಂದರು.
ಪ್ರಾಣ ರಕ್ಷಣೆಗೆ ಆದ್ಯತೆ: ವಿಪತ್ತು ಬಂದಾಗ ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಸರ್ಕಾರ ಮೂಲ ಉದ್ದೇಶ ವ್ಯಕ್ತಿಯ ಪ್ರಾಣವನ್ನು ಉಳಿಸಲು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇಂತಹ ಕಾರ್ಯಕ್ರಮಗಳು ಇದಕ್ಕೆ ಸಹಕಾರಿಯಾಗಲಿವೆ ಎಂದ ಅವರು, ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸಬೇಕು ಎಂದು ಹೇಳಿದರು. ನಾನಾ ರೀತಿಯಲ್ಲಿ ಎದುರಾಗಬಹುದಾದ ನೈಸರ್ಗಿಕ ಮತ್ತು ಮಾನವ ನಿರ್ಮಿತ ಅಪಾಯಗಳನ್ನು ಗುರುತಿಸಿ, ಅದನ್ನು ಹೇಗೆ ಎದುರಿಸಬೇಕು. ಸ್ಥಳೀಯವಾಗಿ ಇರುವ ಸಾಧನ ಸಲಕರಣೆ, ನುರಿತ ತಜ್ಞರು, ಬೇಕಿರುವ ಸಲಕರಣೆಗಳ ಬಗ್ಗೆ ಪಟ್ಟಿಮಾಡಿ ಸ್ಥಳೀಯರನ್ನು ತರಬೇತಿಗೊಳಿಸಬೇಕಿದೆ. ಸರ್ಕಾರಿ ಕಾರ್ಯಪಡೆ ಇದ್ದರೂ ಸಾರ್ವಜನಿಕರ ಸಹಕಾರ ಮುಖ್ಯವಾಗುತ್ತಿದೆ ಎಂದು ವಿ. ಅನ್ಬುಕುಮಾರ್ ಹೇಳಿದರು.
ಕಾರ್ಯಾಗಾರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಎಚ್.ಪಿ. ಮೋಹನ್ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆ ಪ್ರತಿ ತಾಲೂಕು ಹಂತದಲ್ಲಿ ವಿಕೋಪ ನಿರ್ವಹಣಾ ತಂಡಗಳನ್ನು ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ನೆರವಾಗುವ ಉದ್ದೇಶ ಹೊಂದಿದ್ದು 5 ಹಂತಗಳ ತರಬೇತಿ ಕಾರ್ಯಾಗಾರಕ್ಕೆ ಯೋಜಿಸಲಾಗಿದೆ. ಜೊತೆಗೆ ಹಲವು ಸಾಮಾಜಿಕ ಕಳಕಳಿಯ ಉದ್ದೇಶಗಳನ್ನು ಹೊಂದಿದೆ ಎಂದು ಮೆಚ್ಚುಗೆ ಸೂಚಿಸಿದರು. ತಹಸೀಲ್ದಾರ್ ಮಂಜುನಾಥ್ ಮಾತನಾಡಿದರು.