ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಇಲ್ಲಿಗೆ ಸಮೀಪದ ನಾಗರ ನವಿಲೆ ನಿವೃತ್ತ ಶಿಕ್ಷಕ ಎನ್.ಕೃಷ್ಣಮೂರ್ತಿ ಅವರು ಪುತ್ರ ದಿ. ಸುಬ್ರಮಣ್ಯ ಅವರ ಹೆಸರಲ್ಲಿ ನೀಡಲು 2 ಲಕ್ಷ ರು.ಅನ್ನು ಗ್ರಾಮೀಣ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಠೇವಣಿ ಇಡುವುದರ ಮೂಲಕ ದಾನ ನೀಡಿ ಶೈಕ್ಷಣಿಕ ಪ್ರಗತಿಗೆ ಮುಂದಾಗಿ ಮಾದರಿಯಾಗಿದ್ದಾರೆ.
ಇವರು ತಮ್ಮ ಪತ್ನಿ ಪಾರ್ವತಮ್ಮ ಹೆಸರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರ ಹೆಸರಲ್ಲಿ ಠೇವಣಿ ಇಟ್ಟು ಬರುವ ಬಡ್ಡಿ ಹಣದಿಂದ 7ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ 1 ಗಂಡು 1 ಹೆಣ್ಣು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪ್ರೋತ್ಸಾಹ ಸಹಾಯಧನ ನೀಡುತ್ತಿದ್ದಾರೆ. ಕೃಷ್ಣಮೂರ್ತಿ ಹೆಸರಲ್ಲಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರ ಹೆಸರಲ್ಲಿ 1ಲಕ್ಷ ಹಣವನ್ನು ಕಾರೇಹಳ್ಳಿ ಕೆನರಾಬ್ಯಾಂಕಿನಲ್ಲಿ ಠೇವಣಿ ಇಟ್ಟು ಬಂದ ಬಡ್ಡಿ ಹಣದಿಂದ 10ನೇ ತರಗತಿಯ 1 ಗಂಡು 1 ಹೆಣ್ಣು ಮಕ್ಕಳಿಗೆ ಸಹಾಯ ನೀಡಲು ಮುಂದಾಗಿದ್ದು, ಶಿಕ್ಷಣಾಧಿಕಾರಿ ಎಚ್.ಕೆ ಪಾಂಡು ನಿಗದಿ ಮಾಡಿದ ದಿನಾಂಕದಂದು ವಿತರಣೆ ಕಾರ್ಯ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಕಲಾ ವಿಭಾಗದಲ್ಲಿ ಅತಿಹೆಚ್ಚು ಅಂಕ
ಜಾವಗಲ್: ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಗಾಯತ್ರಿ ಕೆ.ಬಿ. ಕಲಾ ವಿಭಾಗದಲ್ಲಿ 549 ಅಂಕ ಪಡೆದು ಕಾಲೇಜಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯಾಗಿದ್ದಾಳೆ. ಜೊತೆಗೆ ಹಾಸನ ಜಿಲ್ಲೆಯ ಗ್ರಾಮಾಂತರ ಸರ್ಕಾರಿಪದವಿ ಪೂರ್ವ ಕಾಲೇಜುಗಳಲ್ಲಿ ಕಲಾ ವಿಭಾಗದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಎನಿಸಿದ್ದಾಳೆ ಎಂದು ಕಾಲೇಜಿನ ಪ್ರಾಂಶುಪಾಲ ವಸಂತರಾಜ್ ಅರಸು ತಿಳಿಸಿದ್ದಾರೆ.
ಕನ್ನಡ ಭಾಷಾ ವಿಷಯದಲ್ಲಿ 100ಕ್ಕೆ 98 ಅಂಕ ಗಳಿಸಿದ್ದಕ್ಕೆ ಕನ್ನಡ ಉಪನ್ಯಾಸಕ ಶ್ರೀನಿವಾಸ್ ಅವರು ರು. 2 ಸಾವಿರ ನಗದು ಬಹುಮಾನ ನೀಡುವುದಾಗಿ ತಿಳಿಸಿದರು.
ಲೇಖನ ಸ್ಪರ್ಧೆ
ಮೈಸೂರು: ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಪ್ರೊ.ಕೆ.ರಾಮದಾಸ್ ಅವರ ಹೆಸರಿನಲ್ಲಿ ಲೇಖನ ಪ್ರಶಸ್ತಿಯನ್ನು ನೀಡಲು, ವಿಚಾರಪೂರ್ಣ, ಪ್ರಗತಿಪರ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೃಷ್ಣ ಜನಮನ ಹೇಳಿದ್ದಾರೆ.
ಬಂದ ಲೇಖನಗಳಲ್ಲಿ ಮೂರು ಅತ್ಯುತ್ತಮ ಲೇಖನಗಳಿಗೆ ರಾಮದಾಸ್ ಲೇಖನ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ಜೂ.18 ರೊಳಗೆ ಲೇಖನಗಳು ತಲುಪಬೇಕು. ಮಾಹಿತಿಗೆ ಮೊ. 9844427129.