ನಗು-ಮಗು ಹೆಸರಿನ ಆಂಬ್ಯುಲೆನ್ಸ್‌ವಾಹನಕ್ಕೆ ಚಾಲನೆ
ಕನ್ನಡಪ್ರಭ ವಾರ್ತೆ ಅರಸೀಕೆರೆ ಜೂ. 3
ರಾಜ್ಯ ಹಾಗೂ ಕೇಂದ್ರ ಸರ್ಕಾರ ಗರ್ಭಿಣಿ ಹಾಗೂ ಬಾಣಂತಿಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಯಾವುದೇ ಮಧ್ಯವರ್ತಿಗಳ ನೆರವಿಲ್ಲದೆ ನೇರವಾಗಿ ಫಲಾನುಭವಿಗಳಿಗೆ ತಲುಪುವಂತಾಗಬೇಕೆಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆಗೆ ಹೆರಿಗೆ ಮಾಡಿಸಿಕೊಳ್ಳಲು ದಾಖಲಾಗುವ ಗರ್ಭಿಣಿಯರು ಹೆರಿಗೆಯಾದ ನಂತರ ಅವರ ಮನೆಗಳಿಗೆ ನಗು ನಗುತ್ತ ತೆರಳಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರದ ಎನ್. ಆರ್. ಎಚ್.ಎಂ ಯೋಜನೆಯಡಿಯಲ್ಲಿ ನಗು-ಮಗು ಹೆಸರಿನ ಆಂಬ್ಯುಲೆನ್ಸ್ ವಾಹನವನ್ನು ಸರ್ಕಾರ ನೀಡಿದ್ದು ಈ ವಾಹನವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಪಟ್ಟಣದ ಸರ್ಕಾರಿ ಜೆ.ಸಿ. ಆಸ್ಪತ್ರೆ ಜನರ ಆರೋಗ್ಯ ಕಾಪಾಡಬೇಕಾದ ಪ್ರಮುಖ ಕೇಂದ್ರವಾಗಿದ್ದರೂ ವೈದ್ಯರ ಕೊರತೆಯಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗಿದೆ ಎಂದು ವಿಷಾದಿಸಿದರು.
ತಾವು ಸರ್ಕಾರ ಮತ್ತು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಿದ್ದು ಶೀಘ್ರವೇ ಈ ಆಸ್ಪತ್ರೆಯಲ್ಲಿ ಖಾಲಿ ಇರುವ ಮೂಳೆ ತಜ್ಞ, ಶಸ್ತ್ರ ಚಿಕಿತ್ಸಾ ತಜ್ಞ, ನೇತ್ರ ತಜ್ಞರಲ್ಲದೆ ಹೆರಿಗೆ ತಜ್ಞರನ್ನು ನೇಮಕವಾಗಲಿದ್ದಾರೆ ಎಂದ ಅವರು ಆಸ್ಪತ್ರೆಯ ಆವರಣವನ್ನು ಶುಚಿಯಾಗಿಡುವುದರ ಜೊತೆಗೆ ಅವ್ಯವಸ್ಥೆಯ ಆಗರವಾಗಿದ್ದ ಶೌಚಾಲಯಗಳನ್ನು ಪುರಸಭೆಯ ಸಹಕಾರದಿಂದ ಸ್ವಚ್ಛಗೊಳಿಸಿದ್ದು, ಆಸ್ಪತ್ರೆಗೆ ಬೇಕಾಗುವ ನೀರಿನ ಸೌಲಭ್ಯ ಒದಗಿಸಲು ಎಲ್ಲ ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು. ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ರೋಗಿಗಳೊಂದಿಗೆ ನಗುಮೊಗದಿಂದ ಸೌಜನ್ಯದಿಂದ ಆತ್ಮೀಯವಾಗಿ ವರ್ತಿಸಿ ಸೇವಾ ಮನೋಭಾವದಿಂದ ಚಿಕಿತ್ಸೆ ನೀಡಬೇಕೆಂದು ಅವರು ಕಿವಿ ಮಾತು ಹೇಳಿದರು.
ಈಗ ಬಂದಿರುವ ನಗು-ಮಗು ಆಂಬ್ಯುಲೆನ್ಸ್ ವಾಹನವು ಹೆರಿಗೆ ಆದ ನಂತರ ಮಗು ಮತ್ತು ಬಾಣಂತಿಯನ್ನು ಉಚಿತವಾಗಿ ಮನೆಗೆ ತಲುಪಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ, ಹೆರಿಗೆಗೆ ಆಸ್ಪತ್ರೆಗೆ ಬರಲು ಈ ವಾಹನವನ್ನು ಬಳಸುವಂತಿಲ್ಲ ಎಂದು ಸೂಚಿಸಲಾಗಿದೆ ಈ ಬಗ್ಗೆ ತಾವು ಇಲಾಖೆಯವರೊಂದಿಗೆ ಚರ್ಚಿಸಿ ಹೆರಿಗೆಗೆ ಬರುವ ಹೆಂಗಸರಿಗೆ ಉಚಿತವಾಗಿ ಆಸ್ಪತ್ರೆಗೆ ಬರಲು ಈ ವಾಹನದ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನೀಡಿದರು.
ಜೆ.ಸಿ. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಚಕ್ರಪಾಣಿ ಮಾತನಾಡಿ ಈ ಆಸ್ಪತ್ರೆಯು ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಾಗಿದೆ. ಈ ಆಸ್ಪತ್ರೆಗೆ ಪ್ರತಿನಿತ್ಯ 500ಕ್ಕೂ ಹೆಚ್ಚು ನಾನಾ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳು ಬರುತ್ತಾರೆ. ಜೊತೆಗೆ 100ಕ್ಕೂ ಹೆಚ್ಚು ಒಳರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಆಸ್ಪತ್ರೆಯಲ್ಲಿ ಒಟ್ಟು ದಂತ ವೈದ್ಯರು ಸೇರಿ 11 ತಜ್ಞ ವೈದ್ಯರಿರಬೇಕು. ಸದ್ಯ ಕೇವಲ 6 ಜನ ಮಾತ್ರ ಇದ್ದೇವೆ 18 ಜನ ನರ್ಸ್‌ಗಳಿದ್ದಾರೆ. ಇಲ್ಲಿಗೆ ಬರುವ ರೋಗಿಗಳಿಗೆ ಹೆಚ್ಚಿನ ಸೇವೆ ನೀಡಲು ಶ್ರಮಿಸುತ್ತಿರುವುದಾಗಿ ನುಡಿದರು.
ಹೆರಿಗೆ ತಜ್ಞೆ ಡಾ.ಸರ್ವಮಂಗಳ ಮಾತನಾಡಿ ಪ್ರತಿ ತಿಂಗಳಲ್ಲಿ ಸರಾಸರಿ 100 ಮಕ್ಕಳು ಈ ಆಸ್ಪತ್ರೆಯಲ್ಲಿ ಜನಿಸುತ್ತವೆ. ಕೇವಲ ಒಬ್ಬರೆ ಹೆರಿಗೆ ವೈದ್ಯರು ಇರುವುದರಿಂದ ಮತ್ತೊಬ್ಬ ವೈದ್ಯರ ಅವಶ್ಯಕತೆ ಇದೆ ಎಂದರು.
ಆರೋಗ್ಯ ರಕ್ಷಾ ಸಮಿತಿ ಸದಸ್ಯ ಖ್ವಾಜಾ ಮೊಯಿನುದ್ದೀನ್, ಸಮಾಜ ಸೇವಕ ಎಂ.ವೈ.ಖಾನ್, ಹೃದ್ರೋಗ ತಜ್ಞ ಡಾ. ಚಕ್ರಪಾಣಿ, ಮಕ್ಕಳ ತಜ್ಞೆ ಡಾ.ಶಾಂತಲ ಮತ್ತಿತರ ಪ್ರಮುಖ ನಾಗರಿಕರು ಆಸ್ಪತ್ರೆ ಸಿಬ್ಬಂದಿ ವರ್ಗದವರು ಇದ್ದರು.