ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬದಲಿಸಲು ರೈತರ ಒತ್ತಾಯ

Rashmi Kasaragodu
Updated On : 4 Jun 2014, 1:09 am

ಕನ್ನಡಪ್ರಭ ವಾರ್ತೆ    ಅರಸೀಕೆರೆ    ಜೂ. 3
ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಒಂದು ವಾರ ಕಳೆದರೂ ಬದಲಿ ಪರಿವರ್ತಕ ಅಳವಡಿಸಿದ ಕಾರಣ ಗ್ರಾಮ ಕಗ್ಗತ್ತಲೆಯಲ್ಲಿ ಮುಳುಗಿದ್ದು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿ ತಾಲೂಕು ರೈತ ಸಂಘ ಚೆಸ್ಕಾಂ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿತು.
ಕಳೆದ ಒಂದು ವಾರದಿಂದ ವಿದ್ಯುತ್ ಪರಿವರ್ತಕ ಸುಟ್ಟುಹೋಗಿದ್ದು ಇಲಾಖಾಧಿಕಾರಿಗಳ ನಿರ್ಲಕ್ಷ್ಯ ಹಾಗೂ ಜನವಿರೋಧಿ ನೀತಿಯಿಂದಾಗಿ ಇಡೀ ಗ್ರಾಮ ಕಗ್ಗತ್ತಲೆಯಲ್ಲಿ ಮುಳುಗಿದೆ. ಇದರಿಂದ ವಿದ್ಯಾರ್ಥಿಗಳಿಗೆ, ರೈತಾಪಿ ವರ್ಗದ ಜನರಿಗೆ ತೀವ್ರ ತೊಂದರೆ ಉಂಟಾಗಿದ್ದು ಈ ಕೂಡಲೇ ವಿದ್ಯುತ್ ಪರಿವರ್ತಕವನ್ನು ಅಳವಡಿಸಬೇಕು. ಇಲ್ಲದಿದ್ದಲ್ಲಿ ಆಹೋರಾತ್ರಿ ಧರಣಿ ನಡೆಸುವುದಾಗಿ ರೈತರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಧರಣಿ ನಿರತನ್ನುದ್ದೇಶಿಸಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಮೇಳೇನಹಳ್ಳಿ ನಾಗರಾಜ್, ರಾಜ್ಯ ರೈತ ಸಂಘದ ಅಧ್ಯಕ್ಷರಾಗಿದ್ದ ಪ್ರೊ ನಂಜುಂಡಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ 1994ರಲ್ಲಿ ವಿದ್ಯುತ್ ಮೀಟರ್‌ಗಳನ್ನು ಕಿತ್ತು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸುರಿದು ಪ್ರತಿಭಟನೆ ನಡೆಸಲಾಗಿತ್ತು. ಈಗ ಏಕಾಏಕಿ ರೈತರನ್ನು ಬಿಲ್ ಕಟ್ಟುವಂತೆ ಒತ್ತಾಯಿಸುತ್ತಿರುವುದು ಸರಿಯಲ್ಲ. ಕೂಡಲೇ ವಿದ್ಯುತ್ ಒದಗಿಸಬೇಕು. ಇಲ್ಲದಿದ್ದಲ್ಲಿ ಪ್ರತಿಭಟನೆ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.
ರೈತ ಸಂಘದ ಜಿಲ್ಲಾ ಸಂಚಾಲಕ ಕನಕಂಚೇನಹಳ್ಳಿ ಪ್ರಸನ್ನಕುಮಾರ್ ಮಾತನಾಡಿ, ತಾಲೂಕು ನಿರಂತರ
ಬರಗಾಲಕ್ಕೆ ತುತ್ತಾಗಿ ರೈತರ ಆರ್ಥಿಕ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರದ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ವಿದ್ಯುತ್ ನಿಲುಗಡೆ ಮಾಡಲು ಹೊರಟಿರುವ ಇಲಾಖೆಯ ಕ್ರಮ ಸರಿಯಲ್ಲ.  ವಿದ್ಯುತ್ ಪರಿವರ್ತಕ ಕೆಟ್ಟ 24 ಗಂಟೆಗಳಲ್ಲಿ ಅದನ್ನು ದುರಸ್ಥಿ ಪಡಿಸಬೇಕೆಂದು ಜಿಲ್ಲಾಧಿಕಾರಿಗಳ ಆದೇಶವಿದು,್ದ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಬೇಕೆಂದು ಆಗ್ರಹ ಪಡಿಸಿದರು.


ಬಾಕಿ ಉಳಿಸಿಕೊಂಡಿರುವ ಮೊತ್ತ ಪಾವತಿಸಲು ಸೂಚನೆ
ಧರಣಿ ನಿರತರನ್ನು ಸಮಾಧಾನ ಪಡಿಸಿ ಮಾತನಾಡಿದ ಚೆಸ್ಕಾಂ ಎಂಜಿನಿಯರ್ ದೇವರಾಜ್, ವಡೇರಹಳ್ಳಿ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ  ವಿದ್ಯುತ್ ಬಿಲ್ ಕಟ್ಟದೆ 3,30,000 ರು. ಬಾಕಿ ಉಳಿಸಿಕೊಂಡಿದ್ದು ರೈತರಿಗೆ, ಗ್ರಾಹಕರಿಗೆ ತೊಂದರೆ ನೀಡಬೇಕೆಂಬ ಉದ್ದೇಶ ತಮ್ಮದಲ್ಲ. ಆದರೆ, ವಿದ್ಯುತ್ ಬಿಲ್ ಪಾವತಿಸದೆ  ವಿದ್ಯುತ್ ಪರಿವರ್ತಕ ನೀಡಲು ಇಲಾಖೆ ನಿಯಮಗಳ ಪ್ರಕಾರ ಸಾಧ್ಯವಿಲ್ಲ. ಆದ್ದರಿಂದ ಬಾಕಿದಾರರು ಕೂಡಲೇ ಬಿಲ್ ಪಾವತಿಸಬೇಕು. ಸುಟ್ಟು ಹೋಗಿರುವ ವಿದ್ಯುತ್ ಪರಿವರ್ತಕವನ್ನು ತಕ್ಷಣ ಬದಲಾಯಿಸಿ ಹೊಸ ಪರಿವರ್ತಕವನ್ನು ಅಳವಡಿಸಲಾಗುವುದು. ಅಲ್ಲದೇ ವಿದ್ಯುತ್ ಬಿಲ್ ಕಟ್ಟದ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ತಿಳಿಸಿದರು. ಇದು ರೈತ ಮುಖಂಡರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.


ಅಧಿಕಾರಿಗಳ ತೀವ್ರ ತರಾಟೆ
ವಿದ್ಯುತ್ ಸಂಪರ್ಕ ಪಡೆಯುವಾಗ ನಾವು ಮೀಟರ್‌ಗೆ ಹಣ ಕಟ್ಟಿರುತ್ತೇವೆ. ಆದರೂ ಪ್ರತಿ ತಿಂಗಳು ಮೀಟರ್ ಬಾಡಿಗೆ ಜೊತೆಗೆ ಬಡ್ಡಿ ಹಾಕಿ ಎಂದು ಇಲಾಖೆ ಹಗಲು ದರೋಡೆ ಮಾಡುತ್ತಿದೆ ಎಂದು ರೈತ ಮುಖಂಡರು ಕಿಡಿಕಾಡಿದರು. ಅಣ್ಣಾಯ್ಕನಹಳ್ಳಿ ಶಿವಮೂರ್ತಿ, ಕರಗುಂದ  ಶಿವಲಿಂಗಪ್ಪ, ವಡೇರಹಳ್ಳಿ ಕಾಂತಯ್ಯ, ನಾಗರಾಜ, ಆನಂದರಾಜ್, ಪ್ರಕಾಶ, ಜಯಣ್ಣ, ಮಾದಾಪುರ  ಪಶುಪತಿ, ಗುರುಸಿದ್ದಯ್ಯ, ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement