ಉದ್ಯಮಿಗಳಿಗೆ ಕಾರ್ಯಾಗಾರ
ಹಾಸನ: ಕೈಮಗ್ಗ ಮತ್ತು ಜವಳಿ ಇಲಾಖೆಯ ನೂತನ ಜವಳಿ ನೀತಿ 2013-18 ರಡಿ. ಜಿಲ್ಲೆಯ ಸಮಗ್ರ ಜವಳಿ ಮೌಲ್ಯ ಸರಣಿಯ ಎಟ್ಲಿ ಚಟುವಟಿಕೆಗಳ ಅಭಿವೃದ್ದಿ ಸಾಧಿಸುವುದು ಮುಖ್ಯ ಉದ್ದೇಶವಾಗಿರುತ್ತದೆ. ಜವಳಿ ಘಟಕಗಳಿಗೆ ನೀಡಲಾಗುವ ಪ್ರೋತ್ಸಾಹ ಧನ ಉತ್ತೇಜನ ಮತ್ತು ಕ್ಷೇತದ ಸಮಗ್ರ ಅಭಿವೃದ್ದಿಗೆ ಪೂರಕವಾಗಿ ಜಿಲ್ಲಾಮಟ್ಟದಲ್ಲಿ ಉದ್ಯಮಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ಜುಲೈ-2014ರ ಮೊದಲನೇ ವಾರದಲ್ಲಿ ಆಯೋಜಿಸಿದ್ದು, ಆಸಕ್ತರು ಅರ್ಜಿ ಆಹ್ವಾನಿಸಲಾಗಿದೆ.
ಮೊದಲು ಬಂದವರಿಗೆ ಆದ್ಯತೆ. ಅರ್ಜ ಪಡೆಯಲು ಜೂನ್ 30 ಕಡೇ ದಿನ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಡಿ.ಐ.ಸಿ ಬಿಲ್ಡಿಂಗ್, ಡೇರಿ ಸರ್ಕಲ್, ಹಾಸನ ದೂ. 08172 240627.
ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಕಳವು
ಹೊಳೆನರಸೀಪುರ: ಪಟ್ಟಣದಲ್ಲಿನ ಬಿಸಿಎಂ ಇಲಾಖೆಗೆ ಸೇರಿದ ಮೆಟ್ರಿಕ್‌ನಂತರದ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ಬುಧವಾರ ತಡರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಒಳ ಪ್ರವೇಶಿಸಿ ರಾಜಾರೋಷವಾಗಿ ಓಡಾಡಿರುವುದಲ್ಲದೇ, ಕಿಟಕಿ ಬಳಿಯಲ್ಲಿ ಇಟ್ಟಿದ ವಿದ್ಯಾರ್ಥಿನಿಯೊಬ್ಬಳ ಮೊಬೈಲ್ ಎತ್ತಿಕೊಂಡು ಪರಾರಿಯಾಗಿರುವ ಘಟನೆನಡೆದಿದೆ.
ಪಟ್ಟಣದಲ್ಲಿನ ಬಾಲಕಿಯರ ಸರ್ಕಾರಿ ಕಿರಿಯ ಕಾಲೇಜಿನ ಹಿಂಭಾಗದಲ್ಲಿನ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ತಡರಾತ್ರಿಯವರೆವಿಗೂ ಕೆಲ ವಿದ್ಯಾರ್ಥಿನಿಯರು ಓದಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಪರಿಚಿತ ಯುವಕನೊಬ್ಬ ಹಾಸ್ಟೆಲ್ ಪ್ರವೇಶಿಸಿ ವಿದ್ಯಾರ್ಥಿನಿಯರ ಕೋಣೆಗಳ ಬಳಿ ಓಡಾಡಿರುವುದಲ್ಲದೇ, ತೆರೆದಿದ್ದ ಕಿಟಕಿಯೊಂದರಿಂದ ವಿದ್ಯಾರ್ಥಿನಿಯೊಬ್ಬಳ ಮೊಬೈಲ್ ಕದಿಯಲು ಮುಂದಾಗಿದ್ದಾನೆ.
ಕಿಟಕಿಯ ಪಕ್ಕದಲ್ಲಿಯೇ ಮಲಗಿದ್ದ ವಿದ್ಯಾರ್ಥಿಯು ಎಚ್ಚರಗೊಂಡಾಗ, ಅಪರಿಚಿತ ಯುವಕನೊಬ್ಬ ಕಿಟಕಿಯೊಳಗೆ ಕೈಹಾಕುತ್ತಿರುವುದನ್ನು ಕಂಡು ಕೂಗಿಕೊಂಡಿದ್ದಾಳೆ. ಕೂಡಲೇ ಆತ ಕೈಗೆ ಸಿಕ್ಕ ಮೊಬೈಲ್ ಎತ್ತಿ ಕೊಂಡು ಪರಾರಿಯಾಗಿದ್ದಾನೆ. ಈ ಘಟನೆಯಿಂದ ಹೌಹಾರಿದ ವಿದ್ಯಾರ್ಥಿನಿಯರು ಮನೆಗೆ ತೆರಳಿದ್ದ ಹಾಸ್ಟೆಲ್ ವಾರ್ಡನ್ ಕಾಮಾಕ್ಷಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಸೂಕ್ತ ರಕ್ಷಣೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಲ್ಲಿ ಮನವಿ ಮಾಡಿದ್ದಾರೆ.