ಜಿಲ್ಲಾದ್ಯಂತ ವಿಶ್ವ ಪರಿಸರ ದಿನ ಆಚರಣೆ
ಕನ್ನಡಪ್ರಭ ವಾರ್ತೆ ಹಾಸನ ಜೂ. 5
ನಗರ ಹಾಗೂ ಜಿಲ್ಲಾದ್ಯಂತ ಗುರುವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಜಿಲ್ಲಾಡಳಿ, ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ನಗರಸಭೆ, ಪ್ರಾದೇಶಿಕ ಸಾರಿಗೆ ಇಲಾಖೆ, ವನ್ಯ ಜೀವಿ ಪರಿಪಾಲಕರ ಸಂಘ, ವ್ಯಕ್ತಿತ್ವ ವಿಕಾಸ ಕೇಂದ್ರ, ನಮ್ಮೂರ ಸೇವೆ ಸಂಘಟನೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಗಿಡಿ ನೆಡುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನಮ್ಮ ಪರಿಸರವನ್ನು ಉಳಿಸಿ ಬೆಳೆಸುವಂತಹ ಕಾರ್ಯ ನಮ್ಮೆಲ್ಲರದಾಗಿದ್ದು, ಹಾಸನದ ಜನತೆಗೆ ಪರಿಸರದ ಬಗ್ಗೆ ಕಾಳಿಜಿ ಹಾಗೂ ಅರಿವು ಇರುವುದರಿಂದ ಆಲೂರು, ಸಕಲೇಶಪುರದಲ್ಲಿ ಸಮೃದ್ಧಿಯಾದ ಕಾಡನ್ನು ಉಳಿಸಿದ್ದಾರೆ. ಆನೆ, ಕರಡಿ ಮತ್ತು ಚಿರತೆಯಂತಹ ಪ್ರಾಣಿಗಳನ್ನು ಮನುಷ್ಯರ ಮೇಲೆ ದಾಳಿ ನಡೆಸಿದರೂ ಜನರು ಕಾಡು ಪ್ರಾಣಿಗಳಿಗೆ ಹಾನಿ ಉಂಟು ಮಾಡಿಲ್ಲ. ಇದರಿಂದಲೇ ತಿಳಿಯಲಿದೆ ಜನತೆಗೆ ಪರಿಸರದ ಬಗ್ಗೆ ಇರುವ ಅರಿವು ಎಂದು ಹೇಳಿದರು.
ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬ ವ್ಯಕ್ತಿ ಒಂದು ಗಿಡ ನೆಟ್ಟು ಅದರ ಪೋಷಣೆ ಮಾಡಬೇಕು. ಪರಿಸರ ಕಾಪಾಡಲು ಕಾನೂನು ಮಹತ್ವದ ಪಾತ್ರ ವಹಿಸಿದೆ ಎಂದ ಅವರು, ಪರಿಸರ ಉಳಿಸಿಕೊಂಡು ಬರಲಾಗುತ್ತಿದೆ. ಇನ್ನು ಹೆಚ್ಚಾಗಿ ಪರಿಸರ ಉಳಿಸಿ ಬೆಳೆಸುವಂತಹ ಕಾರ್ಯವನ್ನು ಮಾಡಬೇಕು. ಕಾಡು ಪ್ರಾಣಿಗಳಿಗೆ ಯಾರು ಹಾನಿ ಉಂಟುಮಾಡದೆ ಪರಿಸರ ಸಂಪತ್ತನ್ನು ವೃದ್ಧಿಗೊಳಿಸಬೇಕು ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಆರ್.ಜೆ.ಸತೀಶ್ ಸಿಂಗ್ ಮಾತನಾಡಿ, ಒಬ್ಬ ಮನುಷ್ಯ ಉಸಿರಾಟಕ್ಕೆ 12 ಮರಗಳ ಅವಶ್ಯಕತೆ ಇದೆ. ನಾವು ಒಂದೊಂದೆ ಮರಗಳನ್ನು ಕಡಿಯುತ್ತ ಹೋದಂತೆ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತ ಹೋಗಲಿದೆ. ಅದೇ ರೀತಿ ಕಾಡು ಪ್ರಾಣಿಗಳು ನಾಡಿಗೆ ಬರುತ್ತಿವೆ ಎಂದು ಹೇಳಲಾಗುತ್ತದೆ. ಇದಕ್ಕೆ ಕಾರಣ ಕಾಡು ಪ್ರಾಣಿಗಳು ಇರುವ ಜಾಗಕ್ಕೆ ಮನುಷ್ಯ ಹೋಗುತ್ತಿದ್ದಾನೆ ಎಂಬುದನ್ನು ಮನುಷ್ಟರು ಅರಿತುಕೊಳ್ಳಬೇಕು ಎಂದರು.
ಕಾಡುಗಳನ್ನು ನಾಶ ಮಾಡಿ ಕಾಂಕ್ರಿಟ್ ಕಾಡನ್ನಾಗಿ ಮಾಡಲಾಗುತ್ತಿದೆ. ಶಿಕ್ಷಣ ಎಂದಾಕ್ಷಣ ಕೇವಲ ಪದವಿಯಲ್ಲ. ಮಾನಸಿಕ, ಬೌದ್ಧಿಕ ವಿಕಾಸನವಾಗಿದೆ. ಎಷ್ಟೇ ಶಿಕ್ಷಿತರಾಗಿದ್ದರು ಸಹ ನಾವು ಹೋದ ಕಡೆಗಳಲ್ಲಿ ಪ್ಲಾಸ್ಟಿಕ್ಗಳನ್ನು ಎಸೆಯುತ್ತೇವೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ಹೊಂದಬೇಕು. ಪ್ರತಿಯೊಬ್ಬರು ತಮ್ಮ ಮನೆ ಮತ್ತು ಶಾಲೆಯ ಆವರಣದಲ್ಲಿ ಗಿಡಿಗಳನ್ನು ನೆಟ್ಟು ಅದನ್ನು ಕಾಪಾಡಬೇಕು ಎಂದು ಕರೆ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಭಟ್ ಮಾತನಾಡಿ, ಅರಣ್ಯ ಸಂರಕ್ಷಣೆಯ ಬಗ್ಗೆ ಸಾಕಷ್ಟು ಕಾನೂನುಗಳಿದ್ದರೂ ಅರಣ್ಯ ನಾಶವಾಗುತ್ತಿದೆ. ಜನರು ಕಾಡಿನ ರಕ್ಷಣೆಗೆ ಮುಂದಾಗಬೇಕು. ಅರಣ್ಯವನ್ನು ನಾವು ರಕ್ಷಣೆ ಮಾಡಿದರೆ ಅವು ನಮ್ಮನ್ನು ರಕ್ಷಣೆ ಮಾಡುತ್ತವೆ. ಆದ್ದರಿಂದ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ವಿ.ಕೋಸಂದರ್, ವನ್ಯಜೀವಿ ಪರಿಪಾಲಕ ಎಚ್.ಪಿ.ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಂ.ಜೆ.ಪದ್ಮಪ್ರಭ, ವಿಜಯಕುಮಾರ್, ಪರಿಸರ ನಿರ್ದೇಶಕ ಶಿವಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜು, ಪ್ರಾದೇಶಿಕ ಸಾರಿಗೆ ಅಧಿಕಾರಿ ರೈಮಂಡ್ ಡಿ. ಅಲ್ಮೆಡಾ, ನಗರಸಭೆ ಆಯುಕ್ತ ಕೃಷ್ಣಮೂರ್ತಿ ಮತ್ತು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೇವರಾಜೇಗೌಡ ಹಾಗೂ ಇತರರು ಇದ್ದರು.
ಜಾಗೃತಿ ಜಾಥಾ
ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ, ಜಿಲ್ಲಾ ವಕೀಲರ ಸಂಘ, ನಗರಸಭೆ, ಪ್ರಾದೇಶಿಕ ಸಾರಿಗೆ ಇಲಾಖೆ, ವನ್ಯ ಜೀವಿ ಪರಿಪಾಲಕರ ಸಂಘ, ವ್ಯಕ್ತಿತ್ವ ವಿಕಾಸ ಕೇಂದ್ರ, ನಮ್ಮೂರ ಸೇವೆ ಸಂಘಟನೆ ಹಾಗೂ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡದೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಥಾವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಆರ್.ಜೆ. ಸತೀಶ್ ಸಿಂಗ್ ಚಾಲನೆ ನೀಡಿದರು.
40 ಅಡಿ ಬೋರ್ಡ್ನಲ್ಲಿ ಚಿತ್ರಬಿಡಿಸಿದ ಮಕ್ಕಳು
ವಿಶ್ವ ಪರಿಸರ ದಿನಾಚರಣೆ ಅಂಗದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಚಿತ್ಕಲ ಪೌಂಡೇಷನ್ ವತಿಯಿಂದ ವಿದ್ಯಾರ್ಥಿಗಳಿಂದ 40 ಅಡಿ ಉದ್ದದ ಬೋರ್ಡ್ ಮೇಲೆ 20 ನಿಮಿಷಗಳ ಕಾಲ ಪರಿಸರಕ್ಕೆ ಸಂಬಂಧಿಸಿದ ಚಿತ್ರಗಳನ್ನ ಮಕ್ಕಳು ಬಿಡಿಸಿದರು. ಇದು ಸಾರ್ವಜನಿಕರನ್ನು ಹೆಚ್ಚು ಆಕರ್ಷಿಸಿತು.
ಯೂರೋ ಶಾಲೆ ವಿದ್ಯಾರ್ಥಿಗಳ ಜಾಥಾ
ಜನತೆಯಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗುರುವಾರ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು. ನಂತರ ಜಿಲ್ಲಾಧಿಕಾರಿ ಕಚೇರಿಗೆ ಬಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ ಅವರಿಗೆ ಮಕ್ಕಳು ಪರಿಸರ ಉಳಿಸಿ ಬೆಳೆಸುವಂತೆ ಮನವಿ ನೀಡಿದರು.
ಸಸಿ ನೆಡಲಾಯಿತು
ನಗರದ ಹೊಸ ಬಸ್ ನಿಲ್ದಾಣದ ಎದುರು ಬೆಳಿಗ್ಗೆ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು. ಇದಕ್ಕು ಮುನ್ನ ನಗರದ ಆಯ್ದ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿವರ್ಗ, ಸಂಘಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ, ಸಾರ್ವಜನಿಕರಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮೆರವಣಿಗೆಯ ಮೂಲಕ ಶ್ರೀಗಂಧದಕೋಠಿ ಆವರಣ, ಆರ್.ಸಿ.ರಸ್ತೆಯಿಂದ ಎನ್.ಆರ್.ವೃತ್ತದ ಮಾರ್ಗವಾಗಿ ಹಾಸನಾಂಭ ಕಲಾಕ್ಷೇತ್ರ ಇಲ್ಲಿಯವರೆಗೆ ಜಾಥಾ ನಡೆಸಿದರು.