'ಪರಿಸರ ಸಂರಕ್ಷಣೆ ಜೀವನದ ಅಂಗವಾಗಲಿ'
ಅರಸೀಕೆರೆ: ಪರಿಸರ ಸಂರಕ್ಷಣೆ ಒಂದು ದಿನದ ಆಚರಣೆಯಾಗದೆ ಜೀವನದ ಒಂದು ಭಾಗವಾದಾಗ ಮಾತ್ರ ವಿನಾಶದ ಅಂಚಿನಲಿರುವ ಪರಿಸರ ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಈ. ಚಂದ್ರಕಲಾ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದಲ್ಲಿರುವ ಕಸ್ತೂರಿ ಬಾ ಶಿಬಿರದಲ್ಲಿ ಗುರುವಾರ ಬೆಳಿಗ್ಗೆ ತಾಲೂಕು ಕಾನೂನು ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ, ಇನ್ನರ್‌ವೀಲ್ ಸಂಸ್ಥೆ, ರೋಟರಿ ಸಂಸ್ಥೆ, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಸ್ತೂರಿ ಬಾ ಸೇವಾ ಟ್ರಸ್ಟ್‌ನ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ವಿಶ್ವಪರಿಸರ ದಿನಾಚರಣೆ ಅಂಗಾವಾಗಿ ಸಸಿ ನೆಡುವ ಮತ್ತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಡಿಲ್ಲದೇ ನಾಡಿಲ್ಲ, ನಾಡಿಲ್ಲದೇ ನಾವಿಲ್ಲ ಎಂಬುದನ್ನು ಅರಿತಾಗ ಮಾತ್ರ ಅರಣ್ಯ ನಾಶವನ್ನು ತಡೆಗಟ್ಟಬಹುದು. ಮುಂದಿನ ದಿನಗಳಲ್ಲಿ ಶುದ್ದ ಗಾಳಿ ಮತ್ತು ಮಳೆ ಕೊರತೆಯ ಆತಂಕವನ್ನು ನಾವು ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬರು ಪರಿಸರ ಸಂರಕ್ಷಣೆ ಮತ್ತು ಅಭಿವೃದ್ದಿಗೆ ಶ್ರಮಿಸಬೇಕು.
ಈ ಕಾರ್ಯಕ್ರಮಗಳು ದಿನಾಚರಣೆಗೆ ಮಾತ್ರ ಸೀಮಿತವಾಗದೇ ಪ್ರತಿ ದಿನ ಶಾಲೆ, ಆಸ್ಪತ್ರೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಮರ ಗಿಡಗಳನ್ನು ಬೆಳಸಿದಾಗ ಪರಿಸರವೂ ಚೆನ್ನಾಗಿರುತ್ತದೆ. ಜೊತೆ ಜೊತೆಯಲ್ಲಿ ನಾವೂ ಆರೋಗ್ಯವಾಗಿರುತ್ತೇವೆ. ನಮ್ಮ ಆರೋಗ್ಯ ಚೆನ್ನಾಗಿದ್ದಲ್ಲಿ ಇಡೀ ಕುಟುಂಬ ಚೆನ್ನಾಗಿರುತ್ತದೆ. ಕುಟುಂಬ ಚೆನ್ನಾಗಿದ್ದಲ್ಲಿ ನೆರೆಹೊರೆಯವರು, ಜಲಚರ ಪ್ರಾಣಿಗಳು ನೆಮ್ಮದಿಯಿಂದ ಇದ್ದು ಭೂಮಿಯೂ ತಂಪಾಗಿರುತ್ತದೆ. ಪರಿಸರ ಉಳಿಸುವಲ್ಲಿ ನಾವು ನಿರ್ಲಕ್ಷ್ಯ ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರು.
ಎರಡನೇ ಅಪರ ಸಿವಿಲ್ ಜಡ್ಜ್ ಯಶವಂತ್ ಕುಮಾರ್, ಸಹಾಯಕ ಸರ್ಕಾರಿ ವಕೀಲೆ ಮಮತಾ, ವಕೀಲರ ಸಂಘದ ಅಧ್ಯಕ್ಷ ಎಂ. ಆರ್. ಸರ್ವೇಶ್ ಮಾತನಾಡಿದರು. ವಲಯ ಅರಣ್ಯಾಧಿಕಾರಿ ಜೆ. ಜಿ. ರವಿ ಸಾಮಾಜಿಕ ಅರಣ್ಯ ಕಾಯಿದೆ ಬಗ್ಗೆ ಉಪನ್ಯಾಸ ನೀಡಿದರು. ವಕೀಲ ಆರ್. ವಿಜಯಕುಮಾರ್ ಪರಿಸರ ರಕ್ಷಣೆ ಬಗ್ಗೆ ಮಾಹಿತಿ ನೀಡಿದರು. ರೋಟರಿ ಅಧ್ಯಕ್ಷ ಪ್ರವೀಣ್‌ಕುಮಾರ್, ಕಾರ್ಯದರ್ಶಿ ಮೋಹನ್, ಇನ್ನರ್‌ವೀಲ್ ಕಾರ್ಯದರ್ಶಿ ಸಂಧ್ಯಾ ವಿಶ್ವನಾಥ್, ಶೋಭ ನಾಗೇಂದ್ರ, ಹೇಮ ನಾಗರಾಜ್ ಇನ್ನಿತರರು ಇದ್ದರು.