ಪರಿಸರ ಸಂರಕ್ಷಣೆಗೆ ಜನಜಾಗೃತಿ
ಚನ್ನರಾಯಪಟ್ಟಣ: ಪಟ್ಟಣದ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನ್ಯಾಯಾಲಯ, ಅರಣ್ಯ ಇಲಾಖೆ ಹಾಗೂ ನಾನಾ ಶಾಲಾ ಮಕ್ಕಳಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಗೂರಮಾರನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಗಿಡ ನಡೆವುದರ ಮೂಲಕ ಪರಿಸರ ದಿನ ಆಚರಿಸಿದರೆ, ಪಟ್ಟಣದ ವಿವಿಧ ಶಾಲೆಯ ಮಕ್ಕಳು ಪರಿಸರ ಉಳಿಸುವ ಕುರಿತು ಹಲವು ರೀತಿಯಲ್ಲಿ ಜನತೆಯ ಮನ ಸೆಳೆದರು.
ಪಟ್ಟಣದ ಜ್ಞಾನಸಾಗರ ಶಾಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಸಿರು ಬಟ್ಟೆ ತೊಟ್ಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೈಕಲ್ ಜಾಥಾ ನಡೆಸಿದರಲ್ಲದೆ ಕೆ.ಆರ್. ಸರ್ಕಲ್‌ನಲ್ಲಿ ಪರಿಸರ ಕುರಿತಾದ ಮಕ್ಕಳ ನಾಟಕ ಪ್ರದರ್ಶಿಸಿದರಲ್ಲದೆ, ಸಾರ್ವಜನಿಕರಿಗೆ ಪರಿಸರ ಕಾಪಾಡುವಂತೆ ಬಿತ್ತಿ ಪತ್ರಗಳನ್ನು ಹಂಚಿಕೆ ಮಾಡಿದರು. ಶಾಲಿನಿ ವಿದ್ಯಾಶಾಲೆಯ ವಿದ್ಯಾರ್ಥಿಗಳು ಪರಿಸರ ಉಳಿಸುವ ಕುರಿತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಭೂಮಿ ಉಳಿಸಿ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಿ ಎಂದು ಘೋಷಣೆ ಕೂಗಿದರೆ, ವಿವೇಕಾನಂದ ಶಾಲೆ ವಿದ್ಯಾರ್ಥಿಗಳು ಪರಿಸರ ಕುರಿತಾದ ನೃತ್ಯ ಪ್ರದರ್ಶಿಸಿದರು.
ನ್ಯಾಯಾಲಯ ಇಲಾಖೆ ಮತ್ತು ಅರಣ್ಯ ಇಲಾಖೆ ವತಿಯಿಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿದ ಪಟ್ಟಣದ ತ್ವರಿತ ವಿಲೇವಾರಿ ನ್ಯಾಯಾಧೀಶ ಶ್ಯಾಂಪ್ರಸಾದ್ ಮಾತನಾಡಿ ನಾವಿಂದು ಪರಿಸರ ಉಳಿಸುವ ಬಗ್ಗೆ ಆಸಕ್ತಿ ತೋರದಿರುವುದರಿಂದ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಲು ಸಾಧ್ಯವಾಗದ ಮಟ್ಟಕ್ಕೆ ಬಂದಿದ್ದು, ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದರಿಂದ ಪರಿಸರ ಸಂರಕ್ಷಿಸಲು ಮುಂದಾಗಬೇಕು ಎಂದು ತಿಳಿಸಿದರು. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ಪರಿಸರ ಉಳಿಸಲು ಮುಂದಾದಾಗ ಮಾತ್ರ ಪರಿಸರ ಸಂರಕ್ಷಿಸಲು ಸಾಧ್ಯ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬಿ.ಹೊಸಮನಿ, ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿಗೌಡ, ಪ್ರಾಂಶುಪಾಲ ಹನುಮಂತರಾಜು, ಪರಿಸರ ಪ್ರೇಮಿ ಚ.ನಂ ಅಶೋಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.