ಮಲ್ಲಮ್ಮ ಕೊಲೆ ಪ್ರಕರಣ: ಮೊಮ್ಮಗಳೇ ಆರೋಪಿ
ಆಲೂರು ತಾಲೂಕಿನ ಮಾವನೂರು ಗ್ರಾಮದ ಬಸವಲಿಂಗಪ್ಪ ಎಂಬವರ ಪತ್ನಿ ಮಲ್ಲಮ್ಮರನ್ನು ಕಳೆದ ಮೇ 25 ರಂದು ಕೊಲೆ ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೃತ ಮಲ್ಲಮ್ಮರ ಇಬ್ಬರು ಮೊಮ್ಮಕ್ಕಳಾದ ಸುಪ್ರಿಯಾ(19) ಮತ್ತು ಆಕೆಯ ತಂಗಿಯನ್ನು ಬಂಧಿಸಲಾಗಿದೆ. ಕೊಲೆ ಮಾಡಿ ಆಕೆಯ ಬಿಳಿಯಿಂದ 2 ಲಕ್ಷ ರು. ಮೌಲ್ಯದ 50 ಗ್ರಾಂನ ಚಿನ್ನದ ಮಾಂಗಲ್ಯ ಹಾಗೂ 15 ಗ್ರಾಂನ ಚಿನ್ನದ ಓಲೆ ಮತ್ತು ಮಾಟಿಗಳನ್ನು ಅಪಹರಿಸಿದ್ದರು. ಕೊಲೆಗೆ ಕಾರಣನಾದ ಪ್ರಮುಖ ಆರೋಪಿ ಸುಪ್ರಿಯಾಳ ಪ್ರಿಯಕರ ಕೀರ್ತಿ ಎಂಬಾತ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.
ಮೈಸೂರಿನ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಸುಪ್ರಿಯಾ, ಕೀರ್ತಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಮದುವೆಯಾಗುವುದಾಗಿಯೂ ಹೇಳಿಕೊಂಡಿದ್ದರು. ಇವರಿಗೆ ಹಣದ ಅವಶ್ಯಕತೆ ಇದ್ದ ಕಾರಣ ಈ ಮೂವರು ಸೇರಿಕೊಂಡು ಅಜ್ಜಿಯನ್ನೇ ಕೊಲೆ ಮಾಡಿದ್ದಾರೆ. ಸುಪ್ರಿಯಾ ಈ ಹಿಂದೆಯೂ ಅಜ್ಜಿ ಮನೆಯಲ್ಲಿ ಕಳ್ಳತನ ಮಾಡಿದ್ದಳು ಎಂಬುವುದು ತನಿಖೆ ವೇಳೆ ತಿಳಿದು ಬಂದಿದೆ.
ಆಲೂರು ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಸತೀಶ್, ವೃತ್ತ ನಿರೀಕ್ಷಕ ಗುರುರಾಜ್, ಪಿಎಸ್ಐ ರಾಜು, ಸುರೇಶ್ ಈ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣವರ ತಿಳಿಸಿದರು.