ಮಿತಿಮೀರಿದ ಭ್ರಷ್ಟಾಚಾರ
ಕನ್ನಡಪ್ರಭ ವಾರ್ತೆ, ಬೇಲೂರು, ಜೂ. 5
ಕಳೆದ 15 ತಿಂಗಳಿಂದ ಪುರಸಭೆಯಲ್ಲಿ ಆಡಳಿತಾಧಿಕಾರಿಗಳ ಆಡಳಿತವಿದ್ದ ಸಂದರ್ಭದಲ್ಲಿ ಕೋಟ್ಯಂತರ ರು. ಗಳ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತರಿಂದ ಸಮಗ್ರ ತನಿಖೆಯಾಗಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ಜಿ. ಶಾಂತಕುಮಾರ್ ಸೇರಿದಂತೆ ಎಲ್ಲ ಸದಸ್ಯರು ಪಕ್ಷಭೇದ ಮರೆತು ಒತ್ತಾಯಿಸಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ನಡೆದ ಚುನಾಯಿತ ಪ್ರತಿನಿಧಿಗಳ ಮೊಟ್ಟ ಮೊದಲ ಸಾಮಾನ್ಯ ಸಭೆಯಲ್ಲಿ ಪುರಸಭೆ ಆಡಳಿತಾಧಿಕಾರಿಗಳ ವಿರುದ್ಧ ಹರಿಹಾಯ್ಧ ಶಾಂತಕುಮಾರ್, ಎಂ ಆರ್. ವೆಂಕಟೇಶ್, ಬಿ.ಎಲ್. ಧರ್ಮೇಗೌಡ, ಮೋಹನ್ ಸೇರಿದಂತೆ ಎಲ್ಲ ಸದಸ್ಯರು 15 ತಿಂಗಳಿಂದ ಪಾರದರ್ಶಕ ಆಡಳಿತ ನಡೆಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ವಾರ್ಡುಗಳಲ್ಲಿ ಪುರಸಭೆ ಅಧಿಕಾರಿಗಳಿಂದ ನಡೆದಿರುವ ಕಾಮಗಾರಿಗಳಲ್ಲಿ ಭಾರಿ ಗೋಲ್ ಮಾಲ್ ನಡೆದಿದ್ದು, ಈ ಬಗ್ಗೆ ಮಾಹಿತಿ ಕೇಳಿದರೆ ಯಾವುದೇ ರೀತಿಯ ಮಾಹಿತಿ ನೀಡದೆ ಚುನಾಯಿತ ಪ್ರತಿನಿಧಿಗಳೊಂದಿಗೆ ಉಡಾಫೆ ವರ್ತನೆ ತೋರುತ್ತಾರೆ. ನಮ್ಮ ವಾರ್ಡಿನ ಕೆಲಸ ಕಾರ್ಯಗಳನ್ನು ಮಾಡಲು ನಮಗೆ ಯಾವುದೇ ಸ್ವತಂತ್ರ್ಯ ಇಲ್ಲವಾಗಿದ್ದು ಯಾವ ಪುರುಷಾರ್ಥಕ್ಕೆ ನಾವು ಪುರಸಭೆ ಸದಸ್ಯರಾಗಿದ್ದೇವೆ ಎಂಬುದು ತಿಳಿಯದಾಗಿದೆ ಎಂದು ಕಿಡಿಕಾರಿದರು.
ಹಿರಿಯ ಸದಸ್ಯ ಬಿ. ಎಲ್. ಧರ್ಮೇಗೌಡ ಮಾತನಾಡಿ, ಸಾಮಾನ್ಯ ಸಭೆಯ ಕೊನೆ ಕ್ಷಣದಲ್ಲಿ 8 ಕಾಮಗಾರಿಗಳ ಪಟ್ಟಿಯನ್ನು ಸೇರಿಸಿದ್ದು ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಎಂಬುದನ್ನು ಮುಖ್ಯಾಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಪಟ್ಟುಹಿಡಿದರು. ಅಲ್ಲದೆ ನೀವು ಮೊಂಡು ಹಿಡಿದು ಪಟ್ಟಿ ಸೇರಿಸಿದರೆ ತಾವು ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದರು
ಸದಸ್ಯ ಎಂ. ಆರ್. ವೆಂಕಟೇಶ್ ಮಾತನಾಡಿ, ನಮ್ಮ ವಾರ್ಡಿನ ಬಡ ದಲಿತನ ಮನೆಗೆ ನಲ್ಲಿ ಹಾಕಿಕೊಡುವಂತೆ ಕಳೆದ 6 ತಿಂಗಳಿಂದ ತಾವು ಮನವಿ ಮಾಡುತ್ತಿದ್ದರೂ ಸ್ಪಂದಿಸುತ್ತಿಲ್ಲ, ಹಣ ಸಿಗುವ ಕಡೆ ಅಧಿಕಾರಿಗಳು ನೌಕರರನ್ನು ಕಳಿಸಿ ಕೆಲಸ ಮಾಡಿಸುತ್ತಾರೆ, ಆದರೆ, ಬಡವರು ಬಂದರೆ ಮೂಗು ಮುರಿಯುತ್ತಾರೆ, ನಮ್ಮ ವಾರ್ಡಿನಲ್ಲಿ 1 ವರ್ಷದಲ್ಲಿ 35 ಲಕ್ಷ ರು. ಗಳ ಕಾಮಗಾರಿ ನೆಡೆದಿದೆ. ನನ್ನ ಮನೆ ಮುಂದೆ ಚರಂಡಿ ಮಾಡಿರುವುದಾಗಿ, ರಸ್ತೆಗೆ ಡಾಂಬರು ಹಾಕಿರುವುದಾಗಿ ಲಕ್ಷಾಂತರು ರು.ಗಳ ಕಳ್ಳ ಬಿಲ್ ಮಾಡಲಾಗಿದೆ. ಆದರೆ, ಅಲ್ಲಿ ಯಾವುದೇ ಕಾಮಗಾರಿಯೂ ನಡೆದಿಲ್ಲ. ಪುರಸಭೆ ಅಧ್ಯಕ್ಷಕರು ಅಧಿಕಾರಿಗಳ ಜೊತೆ ಬಂದರೆ ಈಗಲೇ ಸಾಬೀತು ಪಡಿಸುವುದಾಗಿ ಸವಾಲು ಹಾಕಿದರು.
ಸದಸ್ಯ ಮೋಹನ್ ಮಾತನಾಡಿ, ತಮ್ಮ ಲಕ್ಷ್ಮಿ ಮೆಡಿಕಲ್ಸ್ ಮುಂದೆ ಚರಂಡಿ ಮಾಡಿರುವುದಾಗಿ 5 ಲಕ್ಷ ಬಿಲ್ ಮಾಡಲಾಗಿದೆ. ಆದರೆ, ಯಾವ ಚರಡಿ ಕಾಮಗಾರಿಯೂ ನೆಡೆದಿಲ್ಲ ಎಂದರು. ಅಕ್ರಂ ಪಾಷ ಮಾತನಾಡಿ ತಮ್ಮ ವಾರ್ಡಿನಲ್ಲಿ 3 ರಸ್ತೆಗೆ ಡಾಂಬರು ಕಾಮಗಾರಿ ಮಾಡಿರುವುದಾಗಿ ಲಕ್ಷಾಂತರ ರು. ಬಿಲ್ ಆಗಿದ್ದು ಈ ವರೆಗೆ ಯಾವುದೇ ರಸ್ತೆ, ಡಾಂಬರಿನ ಮುಖವನ್ನೇ ನೋಡಿಲ್ಲ ಎಂದು ಕಿಡಿಕಾರಿದರು.
ಮಾಜಿ ಅಧ್ಯಕ್ಷ ಶಾಂತಕುಮಾರ್, 15 ತಿಂಗಳ ಆಡಳಿತಾಧಿಕಾರಿಗಳ ಅವಧಿಯಲ್ಲಿ ನಡೆದಿರುವ ಕಾಮಗಾರಿ ಬಗ್ಗೆ ತಾವು ಮಾಹಿತಿ ಹಕ್ಕಿನಡಿ ದಾಖಲಾತಿಯನ್ನು ಪಡೆದಿದ್ದು ಅದರಲ್ಲಿ ನಡೆದಿರುವ ಕಾಮಗಾರಿಗೂ, ದಾಖಲೆಯಲ್ಲಿರುವ ಮಾಹಿತಿಗೂ ಅಜಗಜಾಂತರ ವ್ಯತ್ಯಾಸವಿದೆ. ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ಸಾರ್ವಜನಿಕರು ರೊಚ್ಚಿಗೆದ್ದಿದ್ದು ಯಾವುದೇ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಸಿಕ್ಕರೆ ದಾರಿಯಲ್ಲಿ ಅಡ್ಡಹಾಕಿ ಕೇಳುತ್ತಾರೆ. ಸಮರ್ಪಕ ಮಾಹಿತಿ ಇಲ್ಲದಿದ್ದರೆ, ಜನರು ಅಟ್ಟಾಡಿಸಿಕೊಂಡು ಹೊಡೆಯುವ ದಿನ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಪುರಸಭೆ ಅಧ್ಯಕ್ಷ ಗಿರೀಶ್ ಮಾತನಾಡಿ, ಎಲ್ಲ ಸದಸ್ಯರ ಒತ್ತಾಯದ ಮೇರೆಗೆ ಕಳೆದ 15 ತಿಂಗಳ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ನಡೆಸಲು ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುವುದು ಎಂದರು.