ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

82 ಜಾನುವಾರುಗಳ ರಕ್ಷಣೆ

Rashmi Kasaragodu
Updated On : 7 Jun 2014, 12:53 pm

ಕನ್ನಡ ಪ್ರಭ ವಾರ್ತೆ    ಅರಕಲಗೂಡು    ಜೂ. 6
ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 82 ಜಾನುವಾರುಗಳನ್ನು ರಕ್ಷಣೆ ಮಾಡಿರುವ ಪೊಲೀಸರು ಈ ಸಂಬಂಧ ಐವರನ್ನು ಬಂಧಿಸಿದ ಘಟನೆ ಶುಕ್ರವಾರ ಪಟ್ಟಣದಲ್ಲಿ ನಡೆದಿದೆ.
ಸಂತೆ ದಿನವಾದ ಶುಕ್ರವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೊಳೆನರಸೀಪುರ ಡಿವೈಎಸ್ಪಿ ವಿನಾಯಕ ಪಾಟೀಲ್, ಪಟ್ಟಣದ ಬೈ ಪಾಸ್ ರಸ್ತೆಯಲ್ಲಿ ಜಾನುವಾರುಗಳನ್ನು ತುಂಬಿಸಿಕೊಂಡು ಕಸಾಯಿಖಾನೆಗೆ ಸಾಗಿಸುತ್ತಿದ್ದ ಎರಡು ವಾಹನ ಹಾಗೂ ಅಂಕನಾಯಕನಹಳ್ಳಿ ಬಳಿ ಹಾಸನದ ಕಡೆಗೆ ಹೋಗುತ್ತಿದ್ದ ಮತ್ತೊಂದು ಬುಲೆರೋ ವಾಹನವನ್ನು ಪೊಲೀಸರು ಬೆನ್ನಟ್ಟಿ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಾಹನ ಚಾಲಕ ಸೇರಿದಂತೆ ಐವರನ್ನು ಬಂಧಿಸಿದ್ದು ಒಬ್ಬ ತಲೆಮರೆಸಿಕೊಂಡಿದ್ದಾನೆ.
ನಂತರ ವಾಹನಗಳನ್ನು ಪೊಲೀಸ್ ಠಾಣೆ ಬಳಿ ಕರೆತಂದ ಪೊಲೀಸರು ಅಲ್ಲಿ ನೆರೆದಿದ್ದ ಸ್ಥಳೀಯರ ಸಹಾಯದಿಂದ ಜಾನುವಾರುಗಳನ್ನು ವಾಹನದಿಂದ ಕೆಳಗಿಳಿಸಿ ಅವುಗಳಿಗೆ ಕುಡಿಯಲು ನೀರು, ಹುಲ್ಲು ನೀಡಿ ರಕ್ಷಿಸಿದರು.
ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎನ್. ರವಿಕುಮಾರ್, ಕರವೇ ಅಧ್ಯಕ್ಷ ಭಾಸ್ಕರ್, ಜಗದೀಶ್ ಗೌಡ, ಆಟೊ ಚಾಲಕರ ಸಂಘದ ಅಧ್ಯಕ್ಷ ಪುಟ್ಟರಾಜು, ಚಂದು, ವಿಶ್ವನಾಥ್ ಮುಂತಾದವರು ವಾಹನದಿಂದ ಜಾನುವಾರುಗಳನ್ನು ಕೆಳಗಿಳಿಸಲು ಪೊಲೀಸರಿಗೆ ಸಹಕರಿಸಿದರು.
ಆಕ್ರೋಶ
ಪಟ್ಟಣದಲ್ಲಿ ಪ್ರತಿವಾರ ನಡೆಯುವ ಸಂತೆಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಸಾಯಿಖಾನೆಗೆಸಾಗಿಸುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದು ಪೊಲೀಸರ ಕಾರ್ಯವೈಖರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಎರಡು ವಾಹನಗಳಲ್ಲಿ ತುಂಬಿಸಿದ್ದ ಜಾನುವಾರುಗಳನ್ನು ಮಾನವೀಯತೆ ದೃಷ್ಟಿಯಿಂದ ಸಾರ್ವಜನಿಕರೇ ಅವುಗಳನ್ನು ಕೆಳಗಿಳಿಸಲು ಸಹಕರಿಸಿದ್ದಾರೆ. ಇಷ್ಟಾದರೂ ಪೊಲೀಸರು ಒಂದು ವಾಹನದಲ್ಲಿ ಉಸಿರು ಗಟ್ಟಿ ಸಾಯುವ ಸ್ಥಿತಿಯಲ್ಲಿದ್ದ ಜಾನುವಾರುಗಳನ್ನು ಕೆಳಗಿಳಿಸದೇ ಗೋ ಶಾಲೆಗೆ ಸಾಗಿಸುವ ನೆಪದಲ್ಲಿ ವಾಪಾಸು ಕಳಿಸಲು ಮುಂದಾಗಿದ್ದಾರೆ ಎಂದು ಪೊಲೀಸರ ಮೇಲೆ ಹರಿ ಹಾಯ್ದರು.
ಈ ಸಂದರ್ಭ ಜನರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಬುಲೆರೋ ವಾಹನದಲ್ಲಿದ್ದ ಜಾನುವಾರುಗಳನ್ನು ಕೆಳಗಿಸಲು ಮುಂದಾದರು. ವಾಹನಕ್ಕೆ ಜಡಿಯಲಾಗಿದ್ದ ಬೀಗ ಒಡೆದು ಅದರೊಳಗಿದ್ದ ಜಾನುವಾರುಗಳನ್ನು ಕೆಳಗಿಳಿಸಲಾಯಿತು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಬಸವರಾಜು ಮಾತನಾಡಿ, ಪಟ್ಟಣದ ವಾರದ ಸಂತೆಯಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗುವಂತೆ ಪೊಲೀಸ್ ಇಲಾಖೆಗೆ ಸೂಚಿಸಲಾಗುವುದು ಎಂದರು. ಡಿವೈಎಸ್ಪಿ ವಿನಾಯಕ ಪಾಟೀಲ್ ವಶಕ್ಕೆ ಪಡೆದಿರುವ ಜಾನುವಾರುಗಳನ್ನು ಮೈಸೂರಿನ ಗೋ ಶಾಲೆಗೆ ಸಾಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಸಾರ್ವಜನಿಕರ ಆಕ್ರೋಶ ತಣ್ಣಗಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement