ಎರಡು ಅತ್ಯಾಚಾರ ಪ್ರಕರಣ
ಕನ್ನಡಪ್ರಭ ವಾರ್ತೆ, ಹಾಸನ. ಜೂ 6
ಜಿಲ್ಲೆಯಲ್ಲಿ ಒಂದು ದಿನದ ಅಂತರದಲ್ಲಿ ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣ ನಡೆದಿದ್ದು, ನಾಗರಿಕ ಸಮಾಜ ಬೆಚ್ಚಿ ಬೀಳಿಸುವಂತೆ ಮಾಡಿದೆ.
ಸಕಲೇಶಪುರ ತಾಲೂಕಿನ ಕಾಟಳ್ಳಿಯಲ್ಲಿ ಮೂರು ಮಕ್ಕಳ ತಂದೆ, 19 ವರ್ಷದ ಯುವತಿಯ ಮಾನಭಂಗ ಮಾಡಿದ್ದಾನೆ ಹಾಗೂ ಹಾಸನ ನಗರದ ರಾಜ್ಕುಮಾರ್ ಬಡಾವಣೆಯಲ್ಲಿ ಬೆಳಗ್ಗೆ ಶಾಲೆಗೆ ತೆರಳುತ್ತಿದ್ದ 7 ವರ್ಷದ ಬಾಲಕಿ ಮೇಲೆ 20 ವರ್ಷದ ಕಾಮಾಂಧ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ಇಬ್ಬರೂ ಕಾಮುಕರನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.
ಗುರುವಾರ ಸಂಜೆ ಸಕಲೇಶಪುರ ತಾಲೂಕು ಕಾಟಳ್ಳಿಯಲ್ಲಿ, 19 ವರ್ಷದ ಯುವತಿ ಮೇಲೆ ಮೂರು ಮಕ್ಕಳ ತಂದೆ ಜಯಣ್ಣ(36) ಎಂಬಾತ ಅತ್ಯಾಚಾರ ಎಸಗಿದ್ದಾನೆ. ಆ ಸಮಯದಲ್ಲಿ ಯುವತಿಯ ಮನೆಯವರು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ತೆರಳಿದ್ದರು. ಅವರೊಂದಿಗೆ ಜಯಣ್ಣ, ತನ್ನ ಪತ್ನಿ ಮತ್ತು ಮಕ್ಕಳನ್ನೂ ಕಳಿಸಿದ್ದ ಎನ್ನಲಾಗಿದೆ. ಕಳೆದ ಹಲವು ದಿನಗಳಿಂದ ಹೊಂಚು ಹಾಕಿ ಈ ಕೃತ್ಯ ಎಸಗಿರುವ ಕಾಮುಕನಿಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಯುವತಿ ಕಡೆಯವರು ಒತ್ತಾಯಿಸಿದ್ದಾರೆ.
ಈ ಘಟನೆಯ ಹಿಂದೆಯೇ ಶುಕ್ರವಾರ ಬೆಳಗ್ಗೆ ಹಾಸನದ ರಾಜಕುಮಾರ್ ನಗರದಲ್ಲಿ ಸೋದರನೊಂದಿಗೆ ಶಾಲೆಗೆ ಹೋಗುತ್ತಿದ್ದ 7 ವರ್ಷದ ಬಾಲಕಿ ಮೇಲೆ ಇಕ್ಬಾಲ್(20) ಎಂಬಾತ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯನ್ನು ಹಿಂಬಾಲಿಸಿ ಬಂದ ಅದೇ ಬಡಾವಣೆಯ ಇಕ್ಬಾಲ್, 10 ರು. ತೋರಿಸಿ ಚಾಕೋಲೇಟ್ ಕೊಡಿಸುವೆ ಬಾ ಎಂದು ಇಬ್ಬರನ್ನೂ ನಿರ್ಜನ ಪ್ರದೇಶಕ್ಕೆ ಬಲವಂತವಾಗಿ ಎಳೆದೊಯ್ದಿದ್ದಾನೆ. ನಂತರ ಕಾಮಾಂಧ ಇಕ್ಬಾಲ್, ಆ ಬಾಲಕಿಯ ಮೇಲೆ ಅತ್ಯಾಚಾರ ಎಸಗಲು ಪ್ರಯತ್ನಿಸಿದ್ದಾನೆ. ಈತನ ದೌರ್ಜನ್ಯದಿಂದ ಬಾಲಕಿ ಮತ್ತು ಆಕೆಯ ಸೋದರ ಕಿರುಚಿಕೊಂಡಾಗ ಕಲ್ಲು ಎತ್ತಿಹಾಕಿ ಅಮಾಯಕಿಯನ್ನು ಕೊಲ್ಲಲು ಯತ್ನಿಸಿದ್ದಾನೆ. ಕಿರುಚಾಟ ಕೇಳಿ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಬಾಲಕಿಯನ್ನು ರಕ್ಷಿಸಿ, ಕಾಮುಕನಿಗೆ ಧರ್ಮದೇಟು ನೀಡಿ ನಂತರ ಪೆನ್ಷನ್ ಮೊಹಲ್ಲಾ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಈ ಘಟನೆಯಿಂದ ಆಘಾತದ ಜೊತೆಗೆ ಅಸ್ವಸ್ಥಗೊಂಡಿರುವ ಬಾಲಕಿ ಹಾಗೂ ಯುವತಿಯನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಯಣ್ಣನನ್ನು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದು, ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸರು ಇಕ್ಬಾಲ್ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿ ಜಯಣ್ಣನ ಮೇಲೆ ಶಿಸ್ತು ಕ್ರಮವನ್ನುಕೈಗೊಳ್ಳಬೇಕು. ಇನ್ನು ಯಾವ ಹೆಣ್ಣುಮಕ್ಕಳಿಗೂ ಈ ರೀತಿಯ ಘಟನೆ ಆಗಬಾರದು.
ಟಿ ಸಂಜು, ಯುವತಿ ಸಂಬಂಧಿ
ಶಾಲೆಗೆ ಹೋಗುವ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವುದು ಖಂಡನೀಯ. ಆರೋಪಿಗೆ ತಕ್ಕ ಶಿಕ್ಷೆಯಾಗಬೇಕು. ಯಾವ ಮಕ್ಕಳಿಗೂ ಈ ರೀತಿ ಆಗದಂತೆ ಪೊಲೀಸರು ಎಚ್ಚರ ವಹಿಸಬೇಕು. ಅತ್ಯಾಚಾರ ಎಸಗಲು ಮುಂದಾಗುವಂತವರಿಗೆ ತಕ್ಕ ಶಾಸ್ತಿ ಮಾಡಬೇಕು. ಪೊಲೀಸರು ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕು.
ಟಿ ಗಣೇಶ್, ಹಾಸನ ನಗರ ನಿವಾಸಿ