ಕುಡಿಯುವ ನೀರು, ವಿದ್ಯುತ್ ಕೊಡಿ
ಕ.ಪ್ರ. ವಾರ್ತೆ ಹಾಸನ ಜೂ. 6
ಕುಡಿಯುವ ನೀರು ಹಾಗೂ ವಿದ್ಯುತ್ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಮುರಾರನಹಳ್ಳಿ ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿ ವಿ.ಅನ್ಬುಕುಮಾರ್ಗೆ ಮನವಿ ಸಲ್ಲಿಸಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಬವಣೆ ಹೆಚ್ಚಾಗಿದ್ದು, ನೀರಿಗಾಗಿ ಪರದಾಡುವಂತಾಗಿದೆ. ಗ್ರಾಮದಲ್ಲಿ ಕಳೆದ 6 ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಗ್ರಾಮದ ಮಹಿಳೆಯರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಇದಲ್ಲದೆ ಗ್ರಾಮದ ಟ್ರಾನ್ಸ್ಫಾರ್ಮರ್ ಕೂಡ ಸುಟ್ಟು ಹೊಗಿರುವುದರಿಂದ ನೀರಿನ ಸಮಸ್ಯೆ ಉಂಟಾಗಿದೆ. ದಿನ ನಿತ್ಯ ಕುಡಿಯುವ ನೀರಿಗಾಗಿ ಹಾಹಾಕಾರ ಪಡಬೇಕಾದ ಸ್ಥಿತಿ ಉಂಟಾಗಿದೆ ಎಂದು ಅಲವತ್ತುಕೊಂಡರು.
ಸಮಸ್ಯೆ ಬಗೆಹರಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಈಗಾಗಲೇ ಅನೇಕ ಬಾರಿ ಲಿಖಿತ ರೂಪದಲ್ಲಿ ದೂರು ನೀಡಿದ್ದರೂ ಇದುವರೆಗೂ ಕ್ರಮ ಕೈಗೊಂಡಿಲ್ಲ. ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಟ್ರಾನ್ಸ್ಫಾರ್ಮರ್ ಹಾಕಲು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ರಾಜೇಗೌಡ, ಕಾಳೇಗೌಡ, ಮಂಜೇಗೌಡ, ಜಯರಾಮು, ಇಂದ್ರಮ್ಮ, ಜಯಮ್ಮ, ರತ್ನಮ್ಮ ಹಾಗೂ ಇತರರು ಇದ್ದರು.
ಕುರಿ ಸಾಕಣೆಗಾರರ ಸಂಘ ಸ್ಥಾಪನೆ
ಹಾಸನ: ಸಮಗ್ರ ಕೃಷಿ ಪದ್ಧತಿ ಯೋಜನೆಯಡಿ ಇತ್ತೀಚೆಗೆ ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಚನ್ನರಾಯಪಟ್ಟಣ ತಾಲೂಕಿನ ದಂಡಿಗನಹಳ್ಳಿಯಲ್ಲಿ ಸ್ಥಾಪಿತವಾದ ಹಾಸನಾಂಬ ಮಹಿಳಾ ಕುರಿ ಸಾಕಣೆಗಾರರ ಸಂಘದ ಉದ್ಘಾಟನಾ ಸಮಾರಂಭವನ್ನು ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ.ಎಲ್. ಮಂಜುನಾಥ್ ಉದ್ಘಾಟಿಸಿದರು.
ಸಂಘದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಸಂಘವು ಬಂಡೂರು ತಳಿಯ ಕುರಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಾಕಣೆ ಮಾಡಿ ಮುಂದಿನ ವರ್ಷಗಳಲ್ಲಿ ಕುರಿಗಳ ಸಂಖ್ಯೆ ವೃದ್ಧಿಸಿಕೊಂಡು ಜಿಲ್ಲೆಗೆ ತಳಿಗಳನ್ನು ಒದಗಿಸಲು ಸಹಕಾರಿಯಾಗಿ ಲಾಭಗಳಿಸಲು ತಿಳಿಸಿದರು. ಕಾರೆಕೆರೆ ಕೆನರಾ ಬ್ಯಾಂಕ್ ಶಾಖೆಯ ಪ್ರಬಂಧಕ ಪೂರ್ಣಚಂದ್ರ ತೇಜಸ್ವಿ ಮಾತನಾಡಿ, ಸಂಘದ ಅಭಿವೃದ್ಧಿಗೆ ಕಡಿಮೆ ಬಡ್ಡಿ ದರದಲ್ಲಿ ಇರುವಂತಹ ಸಾಲ ಸೌಲಭ್ಯ ಉಪಯೋಗಿಸಿಕೊಳ್ಳುವಂತೆ ಸಂಘದ ಸದಸ್ಯರಿಗೆ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಸ್.ಬಸವರಾಜು ಮಾತನಾಡಿ, ಕೇಂದ್ರದ ವತಿಯಿಂದ ವೈಜ್ಞಾನಿಕ ಪದ್ಧತಿಯಲ್ಲಿ ಕುರಿ ಸಾಕಣೆ ಕುರಿತು ತರಬೇತಿ ಆಯೋಜಿಸಲಾಗುವುದು. ಈ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕೆಂದು ಸದಸ್ಯರಿಗೆ ತಿಳಿಸಿದರು.
ಕೇಂದ್ರದ ಪಶು ವಿಜ್ಞಾನಿ ಡಾ. ಕೆ.ಜೆ. ಕಾಂತರಾಜ, ಬನ್ನೂರು ಕುರಿತಳಿಗಳು ಮಾಂಸಕ್ಕಾಗಿ ಸಾಕುವ ಮುಖ್ಯ ಕುರಿ ತಳಿಗಳಾಗಿವೆ. 1 ವರ್ಷ ವಯಸ್ಸಿನಲ್ಲಿ ಸುಮಾರು 28-30 ಕೆ.ಜಿ. ತೂಕಗಳಿಸುತ್ತದೆ ಮತ್ತು ರೈತರು, 6 ತಿಂಗಳಿಗೊಮ್ಮೆ ಕಾಲುಬಾಯಿ ಜ್ವರ, ಗಳಲೆ ರೋಗ, ಕುರಿಸಿಡುಬು ಮತ್ತು ಕರುಳು ಬೇನೆ ರೋಗಗಳಿಗೆ ಲಸಿಕೆ ಹಾಕಿಸುವುದರಿಂದ ಮತ್ತು 3 ತಿಂಗಳಿಗೊಮ್ಮೆ ಜಂತುನಾಶಕಗಳನ್ನು ಕೊಡಿಸಿ ವೈಜ್ಞಾನಿಕ ಪದ್ಧತಿಯಲ್ಲಿ ಸಾಕಣೆ ಮಾಡಬೇಕು ಎಂದರು.
ಹೈನುಗಾರಿಕೆ: ತಾಲೂಕು ಪ್ರಥಮ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ತಾಲೂಕಿನಲ್ಲಿ 269 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ದಿನಕ್ಕೆ 1.50 ಲಕ್ಷ ಲೀ. ಹಾಲು ಬರುತ್ತದೆ ತಿಂಗಳಿಗೆ 10.50 ಕೋಟಿ ಹಣ ರೈತರಿಗೆ ಸಿಗುತ್ತಿದ್ದು, ಹೈನುಗಾರಿಕೆಯಲ್ಲಿ ತಾಲೂಕು ರಾಜ್ಯದಲ್ಲೇ ಪ್ರಥಮ ಸ್ಥಾನದಲಿದೆ ಎಂದು ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದರು.
ಅವರು ಇಲ್ಲಿಗೆ ಸಮೀಪದ ನೇರಲಕೆರೆ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ನಲ್ಲಿ 450 ಕೋಟಿ ರು. ಠೇವಣಿ ಇಟ್ಟು ರೈತರಿಗೆ 350 ಕೋಟಿ ರು. ಸಾಲ ನೀಡಿದೆ. ತಾಲೂಕಿನಲ್ಲಿ 1 ತಿಂಗಳಿಗೆ 12 ಕೋಟಿ ಹಣದ ಮದ್ಯವನ್ನು ಜನ ಕುಡಿಯುತ್ತಿದ್ದು ಅವರ ಆರೋಗ್ಯ ದಿನೇ ದಿನೇ ಹಾಳಾಗುತ್ತಿದೆ ಧಯಮಾಡಿ ಕುಡಿತದ ದುಶ್ಚಟ ಬಿಟ್ಟು ಆರೋಗ್ಯ ಕಾಪಾಡಿಕೊಳ್ಳಿ, ಆಲ್ಕೋಹಾಲ್ ಬಿಟ್ಟು ಹಾಲು ಕುಡಿಯಿರಿ ಎಂದರು.
1541ರು. ಕಟ್ಟಿ ನಿಮ್ಮ ಹಸುಗೆ ವಿಮೆ ಮಾಡಿಸಿ ಸತ್ತರೆ 30 ಸಾವಿರ ಹಣ ಸಿಗುತ್ತದೆ ಎಂದರು. ಲಕ್ಷ್ಮೀ ದೇವಾಲಯದ ಜಿರ್ಣೋದ್ದಾರ, ಹಾಗೂ ಸಮುದಾಯ ಭವನಕ್ಕೆ ಅನುದಾಲ ಬಿಡುಗಡೆ ಮಾಡಿಸುವ ಭರವಸೆ ನೀಡಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಎನ್.ಬಿ ನಂಜಪ್ಪ ಮಾತನಾಡಿ, ಇಂದಿನ ಯುವಕರು ದುಶ್ಚಟ ಬಿಟ್ಟು ಹಳ್ಳಿಗಳ ಅಭಿವೃದ್ದಿಗೆ ಯೋಚಿಸಿ ವಿಚಾರವಂತರಾಗಿ ದೇಶದ ಪ್ರಗತಿಗೆ ಮುಂದಾಗಬೇಕು ಎಂದರು.
ಗ್ರಾಮದ ಮಾಜಿ ಸೈನಿಕರು ಹಾಗೂ ಹಾಲಿ ಸೈನಿಕರನ್ನುಸನ್ಮಾನಿಸಲಾಯಿತು ಸಮಾರಂಭದಲ್ಲಿ ಎಚ್ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಕೆಂಪ ನಂಜೇಗೌಡ, ಎಪಿಎಂಸಿ ನಿರ್ದೇಶಕ ಬಿ.ಎಚ್. ಶಿವಣ್ಣ, ಕೆಂಪೇಗೌಡ, ಕುಳ್ಳೇಗೌಡ, ಹರೀಶ್, ತಾಪಂ ಮಾಜಿ ಉಪಾಧ್ಯಕ್ಷ ಮಂಜುನಾಥ್, ವಿಶ್ವನಾಥ್, ಸತೀಶ್, ಸಂಘದ ಅಧ್ಯಕ್ಷ ಶಂಕರಲಿಂಗೇಗೌಡ, ಸುಲೋಚನ ನಾಗರಾಜು, ಶಿಕ್ಷಕಿ ಚಂಪಾ, ಜೆಡಿಎಸ್ ಯುವ ಮುಖಂಡ ಇಂದ್ರಜಿತ್ ಸ್ವಾಗತಿಸಿ ವಂದಿಸಿದರು.
ಬೀಜೋಪಚಾರ ಆಂದೋಲನ
ಹಾಸನ: ಭೂಚೇತನ ಸಪ್ತಾಹದ 5ನೇ ದಿನದಲ್ಲಿ ಹಾಸನ ತಾಲೂಕಿನ ತಿರುಪತಿಹಳ್ಳಿ, ಬಸವಘಟ್ಟ, ಸಂಕಲಾಪುರ ಮತ್ತು ಬಿಲಗುಂದ ಗ್ರಾಮಗಳಲ್ಲಿ ಗುಚ್ಚ ಗ್ರಾಮ ಮಟ್ಟದ ತರಬೇತಿ ಹಮ್ಮಿಕೊಳ್ಳಲಾಗಿತ್ತು.
ದುದ್ದ ಹೋಬಳಿ, ತಿರುಪತಿಹಳ್ಳಿ ಗ್ರಾಮದಲ್ಲಿ ಮುಖಂಡ ರಮೇಶ್ ಅಧ್ಯಕ್ಷತೆಯಲ್ಲಿ ತರಬೇತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಡಿ.ಕೆ. ಯೋಗಾನಂದ್, ಭೂಚೇತನ ಯೋಜನೆಯ ಬಗ್ಗೆ ವಿವರಿಸುತ್ತಾ ಮಣ್ಣು ಮತ್ತು ನೀರಿನ ಸಂರಕ್ಷಣೆ ಬಗ್ಗೆ ಹಾಗೂ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಲತಾ ಮಾತನಾಡಿ, ಮಣ್ಣು ಪರೀಕ್ಷೆಯ ಆಧಾರದಲ್ಲಿ ಸಮತೋಲನ ರಸಗೊಬ್ಬರಗಳನ್ನು ಹಾಗೂ ಲಘು ಪೋಷಕಾಂಶಗಳಾದ ಸತುವಿನ ಸಲ್ಫೇಟ್ (5 ಕೆಜಿ, ಪ್ರತಿ ಎಕರೆಗೆ), ಜಿಪ್ಸಂ (100 ಕೆಜಿ) ಮತ್ತು ಬೋರಾಕ್ಸ್(2 ಕೆಜಿ) ಬಳಸಲು ಮಾಹಿತಿ ನೀಡಿದರು.
ಬೀಜೋಪಚಾರದ ಉಪಯುಕ್ತತೆ ಬಗ್ಗೆ ಮಾಹಿತಿ ನೀಡಿ ಬೀಜೋಪಚಾರ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮನವರಿಕೆ ಮಾಡಿಸಿದರು.
ಬಸವಾಘಟ್ಟ ಗ್ರಾಮದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ವಹಿಸಿದ್ದರು, ಗ್ರಾಮದ ಪ್ರಗತಿಪರ ರೈತ ನಾಗರಾಜು, ನಾಗೇಗೌಡ ಇದ್ದರು. ತರಬೇತಿ ಕಾರ್ಯಕ್ರಮದಲ್ಲಿ ಲಘುಪೋಷಕಾಂಶಗಳ ಬಗ್ಗೆ ಹಾಗೂ ಬೀಜೋಪಚಾರದ ಬಗ್ಗೆ ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಯಿತು.
ಕಟ್ಟಾಯ ಹೋಬಳಿ, ಬಿಲಗುಂದ ಗ್ರಾಮದಲ್ಲಿ ಭೂಚೇತನ ತರಬೇತಿಯಲ್ಲಿ ಪ್ರಭಾರ ಕೃಷಿ ಅಧಿಕಾರಿ ನಾಗರಾಜು ಭೂಚೇತನ ಯೋಜನೆಯಡಿ ಜಿಪ್ಸಂ, ಸತುವಿನ ಸಲ್ಫೇಟ್ ಹಾಗೂ ಬೋರಾಕ್ಸ್ ಲಘು ಪೋಷಕಾಂಶಗಳನ್ನು ಬಿತ್ತನೆಗಿಂತ ಮುಂಚಿತವಾಗಿ ಮಣ್ಣಿಗೆ ಸೇರಿಸುವುದರಿಂದ ಭೂಮಿಯಲ್ಲಿ ಪೋಷಕಾಂಶಗಳ ಕೊರತೆ ಕಡಿಮೆಯಾಗಿ ಇಳುವರಿಯಲ್ಲಿ ಶೇ.10 ರಿಂದ 20 ಹೆಚ್ಚಾಗುವುದೆಂದು ತಿಳಿಸಿದರು.
ಕಸಬಾ ಹೋಬಳಿಯ ಸಂಕಲಾಪುರ ಗ್ರಾಮದಲ್ಲಿ ಆಯೋಜಿಸಲಾಗಿದ ತರಬೇತಿಯಲ್ಲಿ ಕೃಷಿ ಅಧಿಕಾರಿ ಕೆ.ಎಚ್. ರಮೇಶ್ಕುಮಾರ್ ಲಘು ಪೋಷಕಾಂಶಗಳ ಬಳಕೆ ಹಾಗೂ ಉಪಯೋಗ, ಸಮತೋಲನ ರಸಗೊಬ್ಬರ ಬಳಕೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ಎಚ್.ಎನ್. ಅಜಿತ್ಪ್ರಸಾದ್ ಬೀಜೋಪಚಾರದ ಉಪಯುಕ್ತತೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಕಸಬಾ ಹೋಬಳಿಯ ರೈತ ಅನುವುಗಾರರು ಹಾಗೂ ಸಂಕಲಾಪುರ ಗ್ರಾಮದ ರೈತರು ಹಾಗೂ ರೈತಮಹಿಳೆಯರು ಭಾಗವಹಿಸಿದ್ದರು.
ನೋಟ್ ಪುಸ್ತಕ ಉಚಿತ ವಿತರಣೆ
ಹಾಸನ: ಎಸ್ಸೆಸ್ಸೆಲ್ಸಿ ಮತ್ತು ನಾನಾ ಪದವಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಹೊಯ್ಸಳ ಕರ್ನಾಟಕ ಸಂಘದ ವತಿಯಿಂದ ಉಚಿತ ನೋಟ್ ಪುಸ್ತಕವನ್ನು ವಿತರಣೆ ಮಾಡಲಾಗುವುದು. ನೋಟ್ ಪುಸ್ತಕದ ಅಗತ್ಯವಿರುವ ವಿದ್ಯಾರ್ಥಿಗಳು ಸಂಘಕ್ಕೆ ಅರ್ಜಿಯನ್ನು ಜೂನ್ 10ರೊಳಗೆ ಸಲ್ಲಿಸಬಹುದು.
ಅರ್ಜಿಯ ಜೊತೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ದಾಖಲೆಯನ್ನು ಕಡ್ಡಾಯವಾಗಿ ಲಗತ್ತಿಸಿ ಅರ್ಜಿಯನ್ನು ಹೊಯ್ಸಳ ಕರ್ನಾಟಕ ಸಂಘ, ವೆಂಕಟೇಶ ನಿಲಯ, ಮಹಡಿ ಮೇಲೆ, ಪಾರ್ಕ್ ರಸ್ತೆ, ಉತ್ತರಬಡಾವಣೆ, ಹಾಸನ ಇಲ್ಲಿಗೆ ತಲುಪಿಸಬೇಕು. ಹೆಚ್ಚಿನ ಮಾಹಿತಿಗೆ 9448256900, 9845903403 ಸಂಪರ್ಕಿಸುವುದು.
ಬೌದ್ಧ ಧಮ್ಮ ಕುರಿತು ವಿಚಾರ ಸಂಕಿರಣ
ಹಾಸನ: ಬೌದ್ಧ ಧಮ್ಮ ದೀಕ್ಷಾ ಅಂಗವಾಗಿ ವಿಚಾರ ಸಂಕಿರಣ, ಬುದ್ದ ವಂದನಾ ಮತ್ತು ಧಮ್ಮ ದೀಕ್ಷಾ ಕ್ರಮವನ್ನು ನಗರದ ವಿಶ್ವೇಶ್ವರ ಬಡಾವಣೆಯ ನಿಶಾ ನಿಲಯದಲ್ಲಿ ಜೂನ್ 10 ರಂದು ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಧಮ್ಮ ದೀಪಾ ಪೂಜಾ ಕಾರ್ಯಕ್ರಮವನ್ನು ಬುದ್ದ ಪ್ರತಿಷ್ಠಾನ, ಬೆಂಗಳೂರು ಇಲ್ಲಿನ ಧಮ್ಮಚಾರಿಗಳಾದ ಡಾ. ಬಿ. ರಾಜಾಣಂದ ಮೂರ್ತಿ ಭೋದ್ ನೆರವೇರಿಸಲಿದ್ದಾರೆ. ಕೊಳ್ಳೇಗಾಲ ಚೇತನವನದ ಪೂಜ್ಯ ಮನೋರಕ್ಕಿತ ಭಂತೇಜಿ ಧಮ್ಮ ಪ್ರವಚನ ನೀಡಲಿದ್ದಾರೆ. ಸಾರಾನಾಥ ಬುದ್ದ ವಿಹಾರದ ಪೂಜ್ಯ ಭೋದಿದತ್ತ ಭಂತೇಜಿ ಪಾಲ್ಗೊಳ್ಳಲಿದ್ದು, ವಿಚಾರ ಸಂಕಿರಣದಲ್ಲಿ ದಸಂಸದ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್, ಕೆ.ಟಿ ಶಿವಪ್ರಸಾದ್, ಲಕ್ಷ್ಮಿನಾರಾಯಣ ನಾಗವಾರ, ನಾರಾಯಣದಾಸ್, ಕೊಟ್ಟೂರು ಶ್ರೀನಿವಾಸ್, ಸೇರಿದಂತೆ ರಾಜ್ಯದ ದಲಿತ ಸಂಘಟನೆ ಮುಖಂಡರು, ವಿಚಾರವಾದಿಗಳು, ಧಮ್ಮ ಪ್ರವಚಕರು ಸೇರಿದಂತೆ ಹಲವರು ಪಾಗೊಳ್ಳಲಿದ್ದಾರೆ ಎಂದು ಕೆಪಿಟಿಸಿಎಲ್ ಕಿರಿಯ ಎಂಜಿನಿಯರ್ ರಂಗಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾಸ್ತಿ 124ನೇ ಜನ್ಮದಿನೋತ್ಸವ
ಮೈಸೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ 124ನೇ ಜನ್ಮದಿನವನ್ನು ವಿಜಯ ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಚರಿಸಲಾಯಿತು.
ಸರಸ್ವತಿಪುರಂನ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್, ಇಂದಿನ ವಿದ್ಯಾರ್ಥಿಗಳು ಓದಿನ ಜತೆಗೆ ಕಲೆ ಹಾಗೂ ಸಾಹಿತ್ಯ ಅಭಿರುಚಿ ಹೊಂದುವುದು ಅವಶ್ಯಕ. ವೃತ್ತಿಪರ ಶಿಕ್ಷಣದಲ್ಲಿ ಕಲೆಯ ಮೌಲ್ಯ ಕಡಿಮೆಯಾಗಿದೆ. ಆದರೆ ಒಳ್ಳೆಯ ಉದ್ಯೋಗದಿಂದ ಉತ್ತಮ ಸಂಪಾದನೆಯಷ್ಟೇ ಮುಖ್ಯವಲ್ಲ, ಅದಕ್ಕಿಂತ ಜೀವನದ ಸಾರ್ಥಕತೆ ಮುಖ್ಯ ಎಂದರು.
ಸಣ್ಣ ಕಥೆಗಳ ಜನಕ ಹಾಗೂ ಕನ್ನಡದ ಆಸ್ತಿಯಾಗಿರುವ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಉನ್ನತ ಹುದ್ದೆ ಬಿಟ್ಟು ಸಾಹಿತ್ಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಾಹಿತ್ಯ ಔಷಧವಲ್ಲ, ಅದು ಆಹಾರವಾಗಬೇಕು. ಅವರ ಆದರ್ಶ ನಮಗೆ ಮಾರ್ಗದರ್ಶಕವಾಗಬೇಕು ಎಂದು ಅವರು ತಿಳಿಸಿದರು.