ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪರಿಸರ ದಿನಾಚರಣೆಕೃಷಿ ಅರಣ್ಯದ ಪಾತ್ರ

Rashmi Kasaragodu
Updated On : 7 Jun 2014, 12:55 pm

ಹಾಸನ: ವಿಶ್ವದಾದ್ಯಂತ ಪರಿಸರ ಮಾಲಿನ್ಯವುಂಟಾಗಿ ಅದು ನಮ್ಮ ಆರೋಗ್ಯ ರಕ್ಷಣಿಗೆ ಮಾರಕವಾಗುತ್ತಿದೆ ಎಂದು ಹಾಸನ ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಎಲ್.ಮಂಜುನಾಥ್ ವಿಷಾದಿಸಿದರು.
ತಾಲೂಕಿನ ಕಂದಲಿಯ ಕೃಷಿ ವಿಜ್ಞಾನ ಕೇಂದ್ರ ಕಂದಲಿಯಲ್ಲಿ ಪರಿಸರ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ಗಿಡ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಆರೋಗ್ಯಕ್ಕೆ ಶುದ್ಧ ಗಾಳಿ, ನೀರು, ಆಹಾರ ಹಾಗೂ ಬೆಳಕು ಅತ್ಯವಶ್ಯಕ ಪ್ರತಿಯೊಬ್ಬನು ಪ್ರತಿ ದಿನ ಸುಮಾರು 2200 ಬಾರಿ ಉಸಿರಾಡುವುದರ ಮೂಲಕ 14-15 ಕೆ.ಜಿ ತೂಕದ 2000 ಗ್ಯಾಲನ್ ನಷ್ಟು ಗಾಳಿ, 17 ಕೆ.ಜಿ.ಗಳಷ್ಟು ಆಹಾರ 3.4  ಗ್ಯಾಲನ್ನಷ್ಟು ನೀರು ಸೇವಿಸುತ್ತಾನೆ. ಈ ಮೂರು ಮೂಲಭೂತ ವಸ್ತುಗಳು ಪರಿಶುಧ್ದ ಪರಿಸರದಲ್ಲಿ ನಮಗೆ ಲಭಿಸುತ್ತವೆ ಎಂದು ಹೇಳಿದರು.
ಕೇಂದ್ರದ ವಿಜ್ಞಾನಿ ಡಾ. ಚನ್ನಕೇಶವ ಮಾತನಾಡಿ, ಕೃಷಿ ಅರಣ್ಯ ಪದ್ಧತಿ ಅಳವಡಿಕೆಯಿಂದ ಹೆಚ್ಚು ಮಳೆಯಾಗುತ್ತದೆ.  ಕೀಟ, ಮೊಟ್ಟೆ, ಮರಿಗಳು ನಾಶವಾಗಿ, ರೋಗದ ಸೊಂಕು ಕಡಿಮೆಯಾಗಿ ಪೀಡೆನಾಶಕಗಳು ಹಾಗೂ ರೋಗನಾಶಕಗಳ ಬಳಕೆ ಕಡಿಮೆಯಾಗುತ್ತದೆ ಎಂದರು.
ಬೇಸಾಯದಲ್ಲಿ ಹೊಸ ಹೊಸ ರಾಸಾಯನಿಕಗಳನ್ನು ಬಳಸುವ ಆಧುನಿಕ ಕೃಷಿ ಪದ್ಧತಿ ವಿಧಾನಗಳು ಬಂದಂತೆಲ್ಲ ಪರಿಸರ ಮಾಲಿನ್ಯಕ್ಕೆ  ಕಾರಣವಾಗಿದೆ.  ಕೃಷಿಯಿಂದ ಆಗುವ ಜಲಮಾಲಿನ್ಯಕ್ಕೆ ಅಲ್ಲಿ ಬಳಕೆಯಾಗುವ ಗೊಬ್ಬರಗಳು, ಕೀಟನಾಶಕಗಳು, ಪೀಡೆನಾಶಕಗಳು ಕಾರಣವಾಗಬಹುದು.
ದ್ವಿದಳಧಾನ್ಯದ ಗುಂಪಿಗೆ ಸೇರಿದ ಗಿಡಮರಗಳನ್ನು ಬೆಳೆಯುವುದರಿಂದ ಸಾರಜನಕ ಸ್ಥಿರೀಕರಣ ಮಾಡಬಹುದು ಹಾಗೂ ರಾಸಾಯನಿಕ ಸಾರಜನಕದ ಬಳಕೆಯನ್ನು ಕಡಿಮೆ ಮಾಡಬಹುದು.
ಕೇಂದ್ರದ ಮತ್ತೊಬ್ಬ ವಿಜ್ಞಾನಿ ಕೃಷ್ಣಾ ರೆಡ್ಡಿ ಮಾತನಾಡಿ, ಕಾಶಿಯ ಸೆರೇಗಿಯ ಎಂಬ ಮರದಿಂದ ಪಾರ್ಥೇನಿಯಂ ಸಸ್ಯ ನಾಶ ಮಾಡಬಹುದು ಎಂದು ತಿಳಿದು ಬಂದಿದೆ. ಈ ಸಸ್ಯದ ದ್ರವ ಮಣ್ಣಿಗೆ ಬಿದ್ದಾಗ ಅಲ್ಲಿರುವ ಪಾರ್ಥೇನಿಯಂ ಬೀಜಗಳು ಹುಟ್ಟದಂತೆ ಮಾಡುತ್ತವೆ. ಕೃಷಿಅರಣ್ಯದಿಂದ ದೊರೆಯುವ ಹಸಿರೆಲೆಯನ್ನು ಗೊಬ್ಬರವಾಗಿ ಉಪಯೋಗಿಸುವುದರಿಂದ ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಬಹುದು. ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೆ ರಾಸಾಯನಿಕ ಗೊಬ್ಬರಗಳಿಂದ ಆಗುವ ಮಾಲಿನ್ಯವನ್ನೂ ತಡೆಯಬಹುದು ಎಂದು ಹೇಳಿದರು.
ವಿಜ್ಞಾನಿಗಳಾದ ಡಾ.ಮಂಜುನಾಥಸ್ವಾಮಿ, ಡಾ. ಕಾಂತರಾಜು, ಡಾ. ಪಂಕಜಾ ಹಾಗೂ ಬಾಲಾಜಿ ಜಾದವ್ ಇದ್ದರು. ಡಾ. ಎ.ಸಿ. ಗಿರೀಶ್ ನಿರೂಪಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement