ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅತ್ಯಾಚಾರ ಪ್ರಕರಣ: ಎಸ್‌ಎಫ್‌ಐ, ಡಿವೈಎಫ್‌ಐ ಪ್ರತಿಭಟನೆ

Rashmi Kasaragodu
Updated On : 8 Jun 2014, 2:09 am

ಹಾಸನ: ದಿನೆ ದಿನೇ ಹೆಚ್ಚಾಗುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಹಾಗೂ ಭಾರತ ಪ್ರಜಾಸತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್‌ಐ)ನ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅತ್ಯಾಚಾರದಂತಹ ಪ್ರಕರಣ ಜಿಲ್ಲೆಯಾದ್ಯಂತ ಅಪ್ರಾಪ್ತ ಬಾಲಕಿಯರು, ಯುವತಿಯರು ಹಾಗೂ ಮಹಿಳೆಯರ ಮೇಲೆ ದಿನೆ ದಿನೇ ಹೆಚ್ಚಾಗುತ್ತಿದೆ.
 ಅನೇಕ ಪ್ರಕರಣಗಳು ಕಣ್ಮರೆಯಾದರೆ ಕೆಲವೇ ಕೆಲವು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತಿವೆ.
ಇದುವರೆಗೂ ಅತ್ಯಾಚಾರ ಪ್ರಕರಣಗಳನ್ನು ತಡೆಯುವಂತಹ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಹೆಣ್ಣು ಮಕ್ಕಳು ಮತ್ತು ಸಾರ್ವಜನಿಕರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ದಿನದ ಅಂತರದಲ್ಲಿ ಹಾಸನದ ರಾಜಕುಮಾರ್ ಬಡಾವಣೆಯಲ್ಲಿ 10 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬನಿಂದ ಅತ್ಯಾಚಾರ ಪ್ರಯತ್ನ ನಡೆದಿದೆ. ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಕಾಮುಕ  ಇಕ್ಬಾಲ್ ಎಂಬಾತ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ ಗುರುವಾರ ಸಂಜೆ ಸಕಲೇಶಪುರ ತಾಲೂಕು ಕಾಟಳ್ಳಿಯಲ್ಲಿ 19 ವರ್ಷದ ಯುವತಿಯೊಬ್ಬಳ ಮೇಲೆ ಮೂರು ಮಕ್ಕಳ ತಂದೆ ಜಯಣ್ಣ(36) ಎಂಬಾತ ಅತ್ಯಾಚಾರ ಎಸಗಿದ್ದಾನೆ. ದುರಂತ ಎಂದರೆ ಯುವತಿಯ ಮನೆಯವರು ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ತೆರಳಿದ್ದರು. ಅವರೊಂದಿಗೆ ಜಯಣ್ಣ, ತನ್ನ ಪತ್ನಿ ಮತ್ತು ಮಕ್ಕಳನ್ನೂ ಕಳಿಸಿದ್ದ.
ಇದರಿಂದ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು ಹಾಗೂ ಸಾರ್ವಜನಿಕರು ಭಯದ ವಾತಾವರಣದಲ್ಲಿ ಬದುಕುವಂತಸ್ಥಿತಿ ಬಂದಿದೆ ಎಂದ ಅವರು, ಇಬ್ಬರು ಬಾಲಕಿಯರು ಬಡ-ದಲಿತ ಕುಟುಂಬಕ್ಕೆ ಸೇರಿದವರು. ಈಗ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಿಸ್ಥಿತಿ ಗಂಬೀರವಾಗಿದೆ. ಕೆಲ ದಿನಗಳ ಹಿಂದೆ ಅರಸೀಕೆರೆ ತಾಲೂಕಿನ ಹಾಗೂ ಅರಕಲಗೂಡು ಭಾಗದಲ್ಲಿ ನಾಲ್ಕು ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ಪ್ರಕರಣಗಳಿಗೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
ಜಿಲ್ಲೆಯಲ್ಲಿ ಹೆಚ್ಚೆಚ್ಚು ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಕೂಡಲೇ ಅತ್ಯಾಚಾರ ಕೃತ್ಯಕ್ಕೆ ಕಾರಣರಾಗಿರುವ ತಪ್ಪಿತಸ್ತರಿಗೆ ಕಾನೂನಿನ ಪ್ರಕಾರ ಮತ್ತು ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ತಡೆ ಕಾಯಿದೆಯಡಿ ಮೊಕ್ಕದಮ್ಮೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಅತ್ಯಾಚಾರದಂತಹ ಕೃತ್ಯ ತಡೆಯಲು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಜಿಲ್ಲಾದ್ಯಂತ ರಚಿಸಬೇಕು. ನಗರದ ಪ್ರಮುಖ ಪ್ರದೇಶಗಳನ್ನು ಗುರುತಿಸಿ ಸೂಕ್ಷ್ಮ ಪ್ರದೇಶವಾದ ಪೆನ್ಷನ್ ಮೊಹಲ್ಲಾ, ರಾಜಕುಮಾರ್ ನಗರ, ಅಂಬೇಡ್ಕರ್‌ನಗರ ಸೇರಿದಂತೆ ಇತರೆ ಭಾಗಗಳಲ್ಲಿ ಸಿಸಿ ಕ್ಯಾಮೆರಾ  ಅಳವಡಿಸಿ ಪೊಲೀಸ್ ಬಿಗಿ ಬಂದೂಬಸ್ತ್ ಮಾಡಬೇಕೆಂದು ಆಗ್ರಹಿಸಿದರು.
ಅತ್ಯಾಚಾರಕ್ಕೀಡಾಗಿರುವ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಎಸ್‌ಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ಎಚ್.ಇ.ಅನ್‌ಷಾದ್, ಕಾರ್ಯದರ್ಶಿ ಎಂ.ಜಿ.ಪ್ರದೀಪ್ ಕುಮಾರ್, ಹಾಗೂ ಡಿವೈಎಫ್‌ಐ ಸಂಘಟನೆಯ ಜಿಲ್ಲಾಧ್ಯಕ್ಷ ವಾಸುದೇವ್, ಕಾರ್ಯದರ್ಶಿ ಎಂ.ಜಿ.ಪೃಥ್ವಿ, ಸಿಐಟಿಯುನ ಅರವಿಂದ್ ಹಾಗೂ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement