ಜಿಲ್ಲಾ ರೈತ ಸಮ್ಮೇಳನ 10ರಂದು
ಕ.ಪ್ರ.ವಾರ್ತೆ ಹಾಸನ ಜೂ. 7,
ಜಿಲ್ಲಾ ರೈತರ ಸಮ್ಮೇಳನವನ್ನು ಜೂ.10ರಂದು ಕಸಾಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಭಾರತೀಯ ಕಿಸಾನ್ (ರೈತ) ಸಂಘ-ಕರ್ನಾಟಕ ಪ್ರಾಂತ ಜಿಲ್ಲಾ ಘಟಕದ ಉಪಾಧ್ಯಕ್ಷ ಹಾಗೂ ಸಮ್ಮೇಳನದ ಸಮಿತಿ ಸಂಚಾಲಕ ಎಸ್.ಪಿ. ರಾಜೀವ್ ಗೌಡ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಉದ್ಘಾಟನೆಯನ್ನು ಆದಿಚುಂಚನಗಿರಿ ಖಾಖಾ ಮಠದ ಶ್ರೀಶಂಭುನಾಥ ಸ್ವಾಮಿಜಿ ನೆರವೇರಿಸಲಿದ್ದಾರೆ. ಸ್ವದೇಶಿ ಜಾಗರಣ ಮಂಚ್‌ನ ಅಖಿಲ ಭಾರತೀಯ ಸಹ ಸಂಚಾಲಕ ಹಾಗೂ ನಿವೃತ್ತ ಪ್ರಾಚಾರ್ಯ ಬಿ.ಎಂ.ಕುಮಾರಸ್ವಾಮಿ ಜಾಗತೀಕರಣದಿಂದ ಕೃಷಿ ಮೇಲಾಗುತ್ತಿರುವ ದುಷ್ಪರಿಣಾಮದ ಬಗ್ಗೆ ವಿಚಾರ ಮಂಡಿಸಲಿದ್ದಾರೆ ಎಂದರು.
ಮಂಡ್ಯ ಪ್ರಾಂತ ಜೈವಿಕ ಪ್ರಮುಖ ರಮೇಶ್ ಬಾಬು, ರಾಸಾಯನಿಕ ಮುಕ್ತ ಕೃಷಿ ಮತ್ತು ಕಡಿಮೆ ಖರ್ಚಿನ ವ್ಯವಸಾಯ, ನೆಲಮಂಗಲ ಪ್ರಾಂತ ಕಾರ್ಯದರ್ಶಿ ಎಂ.ಆರ್.ಸುರೇಶ್ ಕಂದಾಯ ಇಲಾಖೆಯಲ್ಲಿ ರೈತರು ಅನುಭವಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಪ್ರದೇಶ ಕೋಶಾಧ್ಯಕ್ಷ ಎಂ.ಜಿ. ಶಾಂತಪ್ಪಗೌಡ ಸಮಾರೋಪ ಭಾಷಣ ನಡೆಸಲಿದ್ದಾರೆ. ಮದ್ಯಾಹ್ನದ ವೇಳೆ ರೈತರು ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲೆಯ ರೈತರ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿಸಿ ಮನವಿ ಸಲ್ಲಿಸಲಾಗುತ್ತದೆ ಎಂದರು.
ಒಂದು ಸಾವಿರಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದು, ರೈತರಲ್ಲಿ ಒಗ್ಗಟ್ಟು ಮೂಡಿಸಿ ಸರ್ಕಾರದಿಂದ ಲಭ್ಯವಾಗುವ ಸವಲತ್ತುಗಳನ್ನು ಪಡೆದು ಉತ್ತಮ ಬೆಳೆ ಬೆಳೆಯುವುದು ಹಾಗೂ ಕಾನೂನು ರೀತಿ ತೋಟಗಾರಿಕೆ, ಕೃಷಿ, ವಿದ್ಯುತ್, ಅರಣ್ಯ ಹಾಗೂ ಕಂದಾಯ ಇಲಾಖೆಯಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಸಂಘಟಿತ ಹೋರಾಟಕ್ಕೆ ಪ್ರೇರಣೆ ನೀಡುವುದು ನಮ್ಮ ಗುರಿಯಾಗಿದೆ. ರೈತರು ಬೆಳೆದ ಫಸಲಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುತ್ತದೆ ಎಂದರು. ರೈತರು ಕೃಷಿಗೆ ಹೆಚ್ಚು ಒತ್ತು ನೀಡಿ ಕಡಿಮೆ ವೆಚ್ಚದಲ್ಲಿ ರಾಸಯನಿಕ ಬಳಸಿ ಉತ್ತಮ ಫಸಲು ಪಡೆದು ಆರೋಗ್ಯ ಕಾಪಾಡುವಂತೆ ಪ್ರೇರೆಪಿಸಲಾಗುತ್ತದೆ. ಜಿಲ್ಲಾ ಸಮ್ಮೇಳನದಲ್ಲಿ ಕೃಷಿ ತಜ್ಞರು ಪಾಲ್ಗೋಳ್ಳಲಿದ್ದಾರೆ. ರೈತರಿಗೆ ಜೈವಿಕ ಕೃಷಿ ಕಡಿಮೆ ವೆಚ್ಚದಲ್ಲಿ ಉತ್ತಮ ಬೆಳೆ ಪಡೆಯುವ ಬಗ್ಗೆ ಹಾಗೂ ಕಂದಾಯ ಇಲಾಖೆಗಳಲ್ಲಿ ನಡೆಯುತ್ತಿರುವ ಶೋಷಣೆ ತಡೆಯಲು ಹೋರಾಟ ನಡೆಸುವುದರ ಬಗ್ಗೆ ತಿಳವಳಿಕೆಯನ್ನು ಸಮ್ಮೇಳನದಲ್ಲಿ ನೀಡಲಾಗುವುದು.
ವಿದ್ಯುತ್ ಇಲಾಖೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಮತ್ತು ಟಿಸಿ ಬದಲಾವಣೆಗೆ ಸಾವಿರಾರು ರು.ಗಳ ಲಂಚ ನೀಡಬೇಕು ಹಾಗೂ ವಿಳಂಬ ನೀತಿಯನ್ನು ಕಾನೂನು ರೀತಿಯಲ್ಲಿ ವಿರೋಧಿಸುವ ವಿಚಾರ ಚರ್ಚಿಸಲಾಗುತ್ತದೆ. ಕಳೆದ ನಾಲ್ಕು ವರ್ಷಗಳಿಂದಲೂ ರೈತರು ಬೆಳೆದ ಆಲೂಗಡ್ಡೆ ಬೆಳೆಗೆ ಅಂಗಮಾರಿ ರೋಗ ತಗುಲಿ ಉಂಟಾದನಷ್ಟಕ್ಕೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ರಾಜ್ಯ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಒತ್ತಾಯ ಮಾಡಲಾಗಿದೆ. ಜಿಲ್ಲೆಯಲ್ಲಿ ಆಲೂಗಡ್ಡೆ ಬೆಳೆ ಸಂಶೋಧನಾ ಕೇಂದ್ರ ತೆರೆಯಲು ಒತ್ತಾಯ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿಯ ವೈ. ಎಂ. ರಾಜು, ಕೆ. ಸಿ. ನಾಗರಾಜ್, ಜಗದೀಶ್, ಪಿ. ಶ್ರೀನಿವಾಸ್, ನಂಜೇಶಯ್ಯ ಇದ್ದರು.