ನಕಲಿ ಡಿವಿಡಿ: ಇಬ್ಬರ ಬಂಧನ
ಹಾಸನ: ಪಟ್ಟಣದಲ್ಲಿ ನಕಲಿ ಹಾಗೂ ಅಶ್ಲೀಲ ಡಿವಿಡಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ. ಪಟ್ಟಣದ ಬಿ.ಎಚ್.ರಸ್ತೆಯಲ್ಲಿರುವ ಫ್ರೆಂಡ್ಸ್ ಡಿವಿಡಿ ಪ್ಲಾಜಾ ಅಂಗಡಿಯಲ್ಲಿ ಅಕ್ರಮವಾಗಿ ಸಿನಿಮಾಗಳ ನಕಲಿ ಡಿವಿಡಿಗಳನ್ನು ಮಾರಾಟ ಮಾಡುತ್ತಿದ್ದ ಒಬ್ಬನನ್ನು ಪೊಲೀಸರು ಬಂಧಿಸಿ, 750 ರು. ಬೆಲೆಯ 10 ನಕಲಿ ಡಿವಿಡಿಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರತಿಭಾ ಕಾಲೇಜು ಹಿಂಭಾಗದ ಗುಲ್‌ಶಾಹನ್ ಭಂಧಿತ ಆರೋಪಿ.
ಇನ್ನೊಂದು ಪ್ರಕರಣದಲ್ಲಿ ಪಟ್ಟಣದ ಬಿ.ಎಚ್. ರಸ್ತೆಯ ಪಕ್ಕದಲ್ಲಿರುವ ಪುರಸಭಾ ಕಟ್ಟಡದ 1ನೇ ಮಹಡಿಯ ಕೊಠಡಿ ಸಂಖ್ಯೆ-6ರಲ್ಲಿ ಅಕ್ರಮವಾಗಿ ಅಶ್ಲೀಲ ಚಿತ್ರಗಳನ್ನು ಮೊಬೈಲ್‌ಗಳಿಗೆ ರವಾನಿಸುತ್ತಿರುವುದು ಹಾಗೂ ಸಿನಿಮಾ ನಕಲಿ ಡಿವಿಡಿಗಳನ್ನು ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿ, 5,500ರು ಬೆಲೆಯ 10 ನಕಲಿ ಡಿವಿಡಿಗಳನ್ನು ಹಾಗೂ ಸಿಪಿಯು ಹಾರ್ಡ್ ಡಿಸ್ಕ್ ವಶಪಡಿಸಿಕೊಂಡಿದ್ದಾರೆ. ಸುಭಾಷ್ ನಗರದ ಮೋಹನ್‌ಕುಮಾರ್(30) ಬಂಧಿತನು.