ನ್ಯಾಯ ಬೆಲೆ ಅಂಗಡಿಗಳ ಕಾರ್ಯವೈಖರಿಗೆ ಕರವೇ ಆಕ್ರೋಶ
ಬೇಲೂರು: ತಾಲೂಕಿನಲ್ಲಿರುವ ನ್ಯಾಯ ಬೆಲೆ ಅಂಗಡಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅನ್ಯಾಯದ ದಾರಿಯಲ್ಲಿ ಇವೆ. ಈ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಹಾರ ಇಲಾಖೆಯ ಕಚೇರಿಗೆ ಬಂದು ಶಿರಸ್ತೇದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ, ನ್ಯಾಯ ಬೆಲೆ ಅಂಗಡಿಗಳು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಮತ್ತು ಸಂಜೆ 4 ರಿಂದ ರಾತ್ರಿ 8 ರವರೆಗೆ ಬಾಗಿಲು ತೆರೆಯಬೇಕು ಎಂಬುದು ಸರ್ಕಾರದ ಆದೇಶವಾಗಿದೆ. ಆದರೆ, ತಾಲೂಕಿನಲ್ಲಿರುವ ಬಹುತೇಕ ನ್ಯಾಯಬೆಲೆ ಅಂಗಡಿಗಳು ಸರ್ಕಾರದ ಆದೇಶವನ್ನು ಗಾಳಿಗೆ ತೂರಿ ವಾರಕ್ಕೆ 2 ದಿನ ಬಾಗಿಲು ತೆರೆಯುತ್ತಿದ್ದಾರೆ. ಅಲ್ಲದೆ ತಿಂಗಳು ಪೂರ್ತಿ ಬಾಗಿಲು ತೆರೆಯಬೇಕು ಎಂಬ ನಿಯಮವಿದ್ದರೂ ಮನಸಿಗೆ ಬಂದಾಗ ಅಂಗಡಿ ತೆಗೆಯುತ್ತಾರೆ. ಸೀಮೆ ಎಣ್ಣೆಯನ್ನು ವಾರ ಪೂರ್ತಿ ಕೊಡಬೇಕು, ಆದರೆ, ಸೀಮೆಎಣ್ಣೆ ಬಂದ ದಿನ ಕೊಡುವುದು ಬಿಟ್ಟರೆ ಮತ್ತೆ ಕೊಡುವುದಿಲ್ಲ. ಪಡಿತರವನ್ನ ಕೊಡಲು ಗ್ರಾಹಕರಿಗೆ ಆದಾರ್ ಕಾರ್ಡ್ ತನ್ನಿ, ಮತ ಗುರುತಿನ ಪತ್ರ ತನ್ನಿ ಎಂದು ಅಲೆದಾಡಿಸುತ್ತಿದ್ದು ಕಾನೂನು ನಿಯಮಗಳನ್ನು ಉಲ್ಲಂಘಿಸುತ್ತಿರುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಆಹಾರ ಇಲಾಖೆಯ ಶಿರಸ್ತೇದಾರ್ ನಾಗರಾಜ್ ಮಾತನಾಡಿ, ನ್ಯಾಯಬೆಲೆ ಅಂಗಡಿಗಳು ನಿಯಮದಂತೆ ಬೆಳಿಗ್ಗೆ 8 ರಿಂದ 12, 4 ರಿಂದ 8 ರವರೆಗೆ ಮತ್ತು ರಜೆ ಮಾಡದೆ ತಿಂಗಳು ಪೂರ್ತಿ ತೆರೆಯಬೇಕು. ಸೀಮೆಎಣ್ಣೆಯನ್ನು ವಾರಪೂರ್ತಿ ಕೊಡಬೇಕು, ಪಡಿತರವನ್ನು ನೀಡಲು ಗಾಹಕರನ್ನು ಅಲೆದಾಡಿಸಬಾರದು, ಈ ನಿಯಮ ಮೀರಿದಲ್ಲಿ ಇಲಾಖೆಯ ಗಮನಕ್ಕೆ ತಂದರೆ, ಅಂತಹ ಅಂಗಡಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.