ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಿಡಿಒಗಳ ಲಂಚಬಾಕುತನಕ್ಕೆ ಆಕ್ರೋಶ

Rashmi Kasaragodu
Updated On : 8 Jun 2014, 2:10 am

ಕ.ಪ್ರ.ವಾರ್ತೆ   ಚನ್ನರಾಯಪಟ್ಟಣ   ಜೂ. 7,
ದೇವರು ಕೊಟ್ಟರೂ ಅರ್ಚಕ ಕೊಡ ಎಂಬ ಗಾದೆಯಂತೆ ಸರ್ಕಾರ ಗ್ರಾಮ ನೈರ್ಮಲ್ಯಕ್ಕೆ ಏನೆಲ್ಲಾ ಸೌಲಭ್ಯ ನೀಡುತ್ತಿದ್ದರೂ ಗ್ರಾಮ ಪಂಚಾಯಿತಿ ಪಿಡಿಒಗಳು ಮಾತ್ರ  ಲಂಚಕ್ಕೆ ಪೀಡಿಸುತ್ತಿದ್ದಾರೆ. ಇವರಿಗೆ ಕಡಿವಾಣ ಹಾಕಿ ಎಂಬ ಮಾತು ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಹೇಮಾವತಿ ಕೃಷ್ಣನಾಯಕ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಶೌಚಾಲಯ ಮತ್ತು ಕೊಟ್ಟಿಗೆಗೆ ನೀಡುವ ಸರ್ಕಾರದ ಅನುದಾನದಲ್ಲಿ ಗ್ರಾಮ ಪಂಚಾಯಿತಿ ಪಿಡಿಒಗಳು ಫಲಾನುಭವಿಗಳಿಂದ ಹಣಕ್ಕೆ ಪೀಡಿಸುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.
ಗ್ರಾಮ ನೈರ್ಮಲ್ಯಕ್ಕಾಗಿ ಶೌಚಾಲಯ ಕಡ್ಡಾಯವಾಗಿ ಹೊಂದಿ ಎಂದು ಸರ್ಕಾರ ಅನುದಾನ ನೀಡಿದರೆ, ಹಣ ನೀಡಿದರೆ ಮಾತ್ರ ಫಲಾನುಭವಿಗಳ ಹೆಸರು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸೇರ್ಪಡೆಯಾಗುತ್ತದೆ. ಇಲ್ಲದಿದ್ದರೆ ಫಲಾನುಭವಿಗಳ ಹೆಸರು ಮುಂದಿನ ವರ್ಷಕ್ಕೆ ಹಸ್ತಾಂತರವಾಗುತ್ತದೆ ಎಂಬ ಮಾತು ಪಿಡಿಒಗಳಿಂದ ಕೇಳಿ ಬರುತ್ತದೆ ಎಂದು ಆರೋಪಿಸಿದರು.
ಜುಟ್ಟನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಲು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಿಡಿಒಗಳು ಶಾಮಿಲಾಗಿ ಫಲಾನುಭವಿಗಳಿಂದ ಲಂಚಕ್ಕೆ ಪೀಡಿಸುತ್ತಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ತೆಗೆದುಕೊಳ್ಳಿ  ಎಂದು ಸದಸ್ಯ ಮಂಜೇಗೌಡ ಕಾರ್ಯನಿರ್ವಹಣಾಧಿಕಾರಿಗೆ ಒತ್ತಾಯಿಸಿದರು.
ಸದಸ್ಯರ ಮಾತು ಕೇಳಿದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎನ್.ಎಂ. ಮೃತ್ಯುಂಜಯ ಗ್ರಾಮ ಪಂಚಾಯಿತಿಯವರೇ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಫಲಾನುಭವಿ ದೂರು ನೀಡಿದಾಗ ಮಾತ್ರ ತಾವು ಕ್ರಮ ತೆಗೆದುಕೊಳ್ಳಬಹುದಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು ಹಾಗೂ ಪಿಡಿಒಗಳು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವಾಗಿದೆ ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಸದಸ್ಯರ ಗಮನಕ್ಕೆ ತರುವುದಿರಲಿ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆಯದೆ ಹಲವು ಕಾಮಗಾರಿಗಳು ನಡೆಯುತ್ತಿವೆ. 29 ಲಕ್ಷ ವೆಚ್ಚದಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡದೆ ನೇರವಾಗಿ ಕಾಮಗಾರಿ ಪ್ರಾರಂಭಿಸಿದ್ದಾರೆ.
ಈ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉತ್ತರಿಸಿ ಶಾಸಕರ ಶಿಫಾರಸಿನಂತೆ ಕಾಮಗಾರಿ ಪ್ರಾರಂಭಿಸಲಾಗಿದೆ. ಗುಣಮಟ್ಟ ಕುರಿತು ಜಿಲ್ಲಾ ಪಂಚಾಯಿತಿ ಎಂಜನಿಯರ್‌ಗೆ ಸೂಚಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರೂ ಮುಂದಿನ ಸಭೆಯಲ್ಲಿ ತೀರ್ಮಾನವಾಗುವವರಗೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ್ ಸೂಚಿಸಿದರು.
ಕಾಮಗಾರಿಯ ಬಗ್ಗೆ ವಿವರ ನೀಡಲು ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿ ಮುಂದಾದಾಗ ಮಧ್ಯಪ್ರವೇಶಿಸಿದ ಸದಸ್ಯ ಬಸವರಾಜು ಕಾಮಗಾರಿ ನಿರ್ವಹಿಸುತ್ತಿರುವ ಎಂಜಿನಿಯರ್‌ಅನ್ನು ಮುಂದಿನ ಸಭೆಗೆ ಕರೆಸಿ ಕಳಪೆ ಕಾಮಗಾರಿಯ ಬಗ್ಗೆ ಮಾಹಿತಿ ತೆಗೆದುಕೊಂಡು ನಂತರ ತೀರ್ಮಾನ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.
ಕುರಿಗಳನ್ನು ನೀಡಲು ತಮ್ಮಿಂದ ಹೆಸರು ತೆಗೆದುಕೊಂಡಿರಿ ಆದರೆ ಯಾವುದೂ ಕಾಣುತ್ತಿಲ್ಲ ಎಂದು ಸದಸ್ಯರು ತಮ್ಮ ಮನೆಗೆ ಪ್ರತಿನಿತ್ಯ ಅಲೆಯುತ್ತಿದ್ದಾರೆ. ಇವರನ್ನು ಕರೆತಂದು ಧರಣಿ ಮಾಡಿಸುವುದಷ್ಠೇ ಬಾಕಿಯಿದ್ದು, ಇದಕ್ಕೆ ಅವಕಾಶ ನೀಡಬೇಡಿ ಎಂದು ಸದಸ್ಯ ರವಿಕುಮಾರ್ ಸಭೆಯ ಗಮನಕ್ಕೆ ತಂದರು.
ಈ ಬಗ್ಗೆ ಕಾರ್ಯನಿರ್ವಹಣಾಧಿಕಾರಿ ಉತ್ತರ ನೀಡಿ 14-15 ಸಾಲಿನಲ್ಲಿ ಹಿಂದಿನ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ನೀಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದಾಗ ಸದಸ್ಯರೆಲ್ಲರೂ ಮುಂದಿನ ದಿನಗಳಲ್ಲಿ ಸರ್ಕಾರದ ಅನುದಾನವನ್ನು ವಾಪಸ್ ಕಳಿಸಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಸೂಚಿಸಿದರು.
ಉಪಾಧ್ಯಕ್ಷೆ ಶಿಲ್ಪಾ ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement