ಬಿ.ಎ., ಬಿಕಾಂ ಪ್ರವೇಶ ಪ್ರಕ್ರಿಯೆ ಪ್ರಾರಂಭ
ಜಾವಗಲ್: ಹೋಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2014-15ನೇ ಸಾಲಿಗೆ ಬಿಎ., ಬಿ.ಕಾಂ ಪದವಿ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಪ್ರಾಂಶುಪಾಲ ಡಾ. ಕೆ.ಭಾಷಾ ತಿಳಿಸಿದ್ದಾರೆ. ಇತಿಹಾಸ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳನ್ನೊಳಗೊಂಡ ಸಂಯೋಜನೆಗಳು ಬಿ.ಎ ವಿಭಾಗದಲ್ಲಿ ಅಧ್ಯಯನಕ್ಕೆ ಲಭ್ಯವಿದೆ. ವಾಣಿಜ್ಯ ಪದವಿಗೆ ಹೆಚ್ಚಿನ ಬೇಡಿಕೆಯ ದೃಷ್ಟಿಯಿಂದ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳಿಗೂ ಬಿ.ಕಾಂ ಗೆ ಪ್ರವೇಶ ನೀಡುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಉತ್ತಮ ಗ್ರಂಥಾಲಯ, ಮೂಲ ಸೌಲಭ್ಯಗಳ ವ್ಯವಸ್ಥೆಯಿದ್ದು, ಸತತವಾಗಿ ಶೇ.100 ರಷ್ಟು ಫಲಿತಾಂಶ ಹೊಂದಿರುವ ಕಾಲೇಜಾಗಿದೆ. ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ನಿಟ್ಟಿನಲ್ಲಿ ಕಂಪ್ಯೂಟರ್, ಅಂತರ್ಜಾಲ, ಇಂಗ್ಲಿಷ್ ಭಾಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ತರಬೇತಿ ಸೌಲಭ್ಯ, ವಿದ್ಯಾರ್ಥಿವೇತನ ಮತ್ತಿತರ ಸೌಲಭ್ಯಗಳನ್ನು ಹೊಂದಿರುವ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡು ಸರ್ಕಾರದ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.