150 ಅಡಿ ಪ್ರಪಾತಕ್ಕೆ ಉರುಳಿದ ಲಾರಿ, ಅಚ್ಚರಿ ರೀತಿಯಲ್ಲಿ ಪಾರಾದ ತಾಯಿ- ಮಗು
ಪಾಂಡವಪುರ: ಪ್ರವಾಸಿಗರನ್ನು ಕರೆ ತಂದಿದ್ದ ಲಾರಿ ಸುಮಾರು 150 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿರುವ ಪರಿಣಾಮ ಚಾಲಕ ತೀವ್ರ ಗಾಯಗೊಂಡು, ತಾಯಿ-ಮಗು ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ತೊಣ್ಣೂರುಕೆರೆಯಲ್ಲಿ ಭಾನುವಾರ ಜರುಗಿದೆ.
ಚನ್ನಪಟ್ಟಣದಿಂದ ಸುಮಾರು 40 ಮಂದಿ ಮುಸ್ಲಿಂ ಕುಟುಂಬದವರು ಬಾಬಾ ಬುಡನ್ಗಿರಿ, ಜೋಗದ ಜಲಪಾತ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ವಾಪಸ್ ಚನ್ನಪಟ್ಟಣಕ್ಕೆ ತೆರಳುವ ಮುನ್ನ
ತಾಲೂಕಿನ ಪ್ರವಾಸಿ ತಾಣ ಕೆರೆ ತೊಣ್ಣೂರಿಗೆ ಆಗಮಿಸಿ ಸಮೀಪದಲ್ಲಿಯೇ ಇರುವ ದರ್ಗ ವೀಕ್ಷಣೆಗಾಗಿ ತಾಯಿ ಮಗು ಬಿಟ್ಟು ಲಾರಿಯಲ್ಲಿದ್ದವರೆಲ್ಲಾ ಕೆಳಗಿಳಿದು ಹೋಗಿದ್ದರು. ಆದರೆ ಲಾರಿಯಲ್ಲೇ ಉಳಿದಿದ್ದ ಗುಲ್ಲಾ ಎಂಬಾಕೆ ತನ್ನ ಮಗುವಿಗೆ ಹಾಲುಣಿಸುತ್ತಿದ್ದರು. ಈ ವೇಳೆ ಲಾರಿ ಚಾಲಕ ನಿಸಾರ್ ಅಹ್ಮದ್ ಲಾರಿಯನ್ನು ಹಿಂದಕ್ಕೆ ತೆಗೆದುಕೊಂಡು ಮುಂದೆ ಚಲಿಸಲು ಮುಂದಾಗಿದ್ದಾರೆ. ಆ ವೇಳೆ ಲಾರಿ ಆಯತಪ್ಪಿ ತೊಣ್ಣೂರು ಕೆರೆಯ ಏರಿಯಿಂದ 150 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದೆ ಎನ್ನಲಾಗಿದೆ. ಆದರೆ ಅದೃಷ್ಟವಶಾತ್ ಲಾರಿಯಲ್ಲಿದ್ದ ತಾಯಿ, ಮಗು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.