ಪರಿಸರ ಸೇವೆ: ರಾಜೀವ್ ಗೌಡಗೆ ಸನ್ಮಾನ
ಹಾಸನ: ಜಿಲ್ಲಾ ಅರಣ್ಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಸಂಸ್ಥೆ ಹಾಗೂ ಇತರೆ ಪರಿಸರ ಸಂರಕ್ಷಣೆಗಾಗಿ ಕಾರ್ಯ ಪ್ರವೃತ್ತ ಸಂಘ ಸಂಸ್ಥೆಗಳ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಸಮಾರಂಭದಲ್ಲಿ ನಮ್ಮೂರ ಸೇವೆ ಸಂಘಟನೆಯ ಸಂಚಾಲಕ ರಾಜೀವ್ ಗೌಡ ಅವರನ್ನು ಸನ್ಮಾನಿಸಲಾಯಿತು.
ರಾಜೀವ್ ಗೌಡರ ಸುದೀರ್ಘ ಪರಿಸರ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು. ಅವರು ಸಂಘಟನೆಯ ಸಂಚಾಲಕರಾಗಿ ಹಾಸನ ನಗರದ 28ಕ್ಕೂ ಹೆಚ್ಚು ಉದ್ಯಾನವನದ ಜಾಗವನ್ನು ಗುರುತಿಸಿ ಗಿಡಗಳನ್ನು ನೆಟ್ಟಿ ಪೋಷಿಸಿದ್ದು, ಎಂ.ಜಿ.ರಸ್ತೆ, ರಿಂಗ್ ರಸ್ತೆ, ಬಿ.ಎಂ.ರಸ್ತೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ 10,000 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿರುವ ನಿರಂತರ ಪರಿಸರ ಚಟುವಟಿಕೆಯಲ್ಲಿ ತೊಡಗಿರುವುದನ್ನು ಗಮನಿಸಿ ಈ ಸನ್ಮಾನ ಮಾಡಲಾಗಿದೆ. ಸನ್ಮಾನಿತರಾಗಿ ಮಾತನಾಡಿದ ರಾಜೀವ್ ಗೌಡ, ಈ ಸನ್ಮಾನ ನನ್ನೊಡನೆ ಕೈಜೋಡಿಸಿರುವ ನೂರಾರು ಸ್ನೆಹಿತರು, ಸಹಕರಿಸಿದ ಎಲ್ಲಾ ನಗರ ನಿವಾಸಿಗಳಿಗೂ ಸಲ್ಲುತ್ತದೆ ಎಂದು ಹೇಳಿದರು. ಸನ್ಮಾನದಿಂದ ಇನ್ನೂ ಹೆಚ್ಚಿನ ಪರಿಸರದ ಕೆಲಸ ಮಾಡಲು ಸ್ಪೂರ್ತಿ ಬಂದಂತಾಗಿದೆ. ಈ ಕಾರ್ಯವನ್ನು ನಿರಂತರ ಮುಂದುವರಿಸುವುದಾಗಿ ಕೃತಜ್ಞತೆ ಸಲ್ಲಿಸಿದರು.