ಸಮುಚ್ಚಯ ಉದ್ಘಾಟನೆ ವಿಳಂಬ
ಹೊಳೆನರಸೀಪುರ: ರಾಜ್ಯದ ಗೃಹ ಸಚಿವರಿಂದ ಜೂ.9ರಂದು ಉದ್ಘಾಟನೆಗೊಳ್ಳಬೇಕಾಗಿದ್ದ ಪಟ್ಟಣದಲ್ಲಿನ ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವಸತಿ ಗೃಹಗಳು, ಅವಧಿ ಮುಗಿದರೂ ಕಾಮಗಾರಿ ಮುಗಿಯದ ಕಾರಣದಿಂದಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಜೂ.9ರಂದು ಜಿಲ್ಲೆಗೆ ಭೇಟಿ ನೀಡಲಿದ್ದ ರಾಜ್ಯದ ಗೃಹ ಸಚಿವ ಜಾರ್ಜ್ ಅವರು ಈ ವಸತಿ ಸಮುಚ್ಚಯವನ್ನು ಉದ್ಘಾಟನೆಗೊಳಿಸಬೇಕಿತ್ತು. ಆದರೆ ಕಾಮಗಾರಿ ಮುಗಿಯದೇ ಇರುವ ಕಾರಣದಿಂದಾಗಿ ಉದ್ಘಾಟನಾ ಕಾರ್ಯವನ್ನು ಮುಂದೂಡಲ್ಪಟ್ಟಿರುವುದಾಗಿ ತಿಳಿದುಬಂದಿದೆ. ಕೆ-ಸೇಫ್ ಯೋಜನೆಯಡಿಯಲ್ಲಿ ಇಲ್ಲಿನ ಅರಕಲಗೂಡು ರಸ್ತೆಯಲ್ಲಿರುವ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಿಗಾಗಿ 12ವಸತಿ ಗೃಹಗಳು ಹಾಗೂ ಇಲಾಖೆಯ ಅಧಿಕಾರಿಗಳಿಗಾಗಿ 2ವಸತಿ ಗೃಹಗಳನ್ನು 204.72 ಲಕ್ಷ ರು ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಐಎಎಸ್ ಪೂರ್ವಭಾವಿ ಪರೀಕ್ಷೆ ಆ. 24ಕ್ಕೆ
ಹಾಸನ: ಕೇಂದ್ರ ಲೋಕ ಸೇವಾ ಆಯೋಗವು ಆ. 24 ರಂದು ಐಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಪದವೀಧರರು ಅಥವಾ ಅಂತಿಮ ವರ್ಷದ ಪದವಿಯಲ್ಲಿ ಓದುತ್ತಿರುವವರು ಮತ್ತು ಆ.1 ರಂತೆ ಕನಿಷ್ಠ 21 ವರ್ಷಗಳು ಗರಿಷ್ಟ 32 ವರ್ಷದೊಳಗಿರುವ (ನಿಯಮಾನುಸಾರ ವಯಸ್ಸಿನಲ್ಲಿ ಸಡಿಲಿಕೆ ಇದೆ) ಯುವಕ ಯುವತಿಯರು ಆನ್ಲೈನ್ ಮೂಲಕ ಜೂ. 30 ರೊಳಗೆ ಅರ್ಜಿ ಸಲ್ಲಿಸಬಹುದು. ಜಾಲತಾಣ- ಢಿಢಿಢಿ.್ಡಠಡ್ಛ್ಟಟಿಟ್ಝಟಿಜ.ಟ್ಝ್ಛಿ.್ಝಟಿ ಪರೀಕ್ಷಾ ಶುಲ್ಕ 100 ರು. ನಿಗದಿಪಡಿಸಲಾಗಿದೆ. ಆದರೆ ಪರಿಶಿಷ್ಟ, ಅಂಗವಿಕಲರು, ಮಹಿಳಾ ಅಭ್ಯರ್ಥಿಗಳಿಗೆ ಸಡಿಲಿಕೆ ಇದೆ. ಆಸಕ್ತರು ಮಾಹಿತಿಗಾಗಿ ಹಾಸನದ ಕೃಷಿಕ್ ಸರ್ವೋದಯ ಫೌಂಡೇಷನ್ ಅನ್ನು ಖುದ್ದಾಗಿ ಅಥವಾ ಮೊ. 9845493336 ಸಂಪರ್ಕಿಸಲು ಕೋರಲಾಗಿದೆ.
ಇಂದು ಜಿಪಂ ಸಭೆ
ಹಾಸನ ಜಿಲ್ಲಾ ಪಂಚಾಯ್ತಿಯ ಅಧ್ಯಕ್ಷ ಡಿ.ಜಿ.ಅಂಬಿಕಾ ರಾಮಣ್ಣ ಅಧ್ಯಕ್ಷತೆಯಲ್ಲಿ ಜೂ.9 ರಂದು ಬೆಳಗ್ಗೆ 11 ಕ್ಕೆ ಜಿಲ್ಲಾ ಪಂಚಾಯ್ತಿಯ ಹೊಯ್ಸಳ ಸಭಾಂಗಣದಲ್ಲಿ ವಿಶೇಷ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳಿಗೆ ಲೇಖನ ಸಾಮಗ್ರಿ ಉಚಿತ ವಿತರಣೆ
ಅರಸೀಕೆರೆ: ತಾಲೂಕಿನ ಕಣಕಟ್ಟೆ ಗ್ರಾಮದಲ್ಲಿ ಅವರು ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಲೇಖನ ಸಾಮಗ್ರಿಗಳನ್ನು ಮೈಸೂರಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ್ ಉಚಿತವಾಗಿ ವಿತರಿಸಿದರು. ತಾಪಂ ಸದಸ್ಯ ಕೆ.ಆರ್.ದಿನೇಶ್, ಕಣಕಟ್ಟೆ ಗ್ರಾಮದ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಕೆ.ಎ.ನಾಗೇಶ್ ಇದ್ದರು.