ಸೌಲಭ್ಯ ವಂಚಿತ ಮುಳುಗಡೆ ಗ್ರಾಮಗಳು!
ಎ. ರಾಘವೇಂದ್ರ ಹೊಳ್ಳ
ಬೇಲೂರು: ತಾಲೂಕಿನ ಯಗಚಿ ಹಿನ್ನೀರಿನ ವ್ಯಾಪ್ತಿಯ ಗ್ರಾಮಗಳಿಗೆ ಸರಿಯಾದ ರಸ್ತೆ, ಚರಂಡಿ, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಬೇಸಿಗೆಯಲ್ಲಿ ನೀರಿಗೆ ಬರ, ಮಳೆಗಾಲದಲ್ಲಿ ಶೀತಪೀಡಿತದಿಂದ ಗ್ರಾಮಸ್ಥರು ತತ್ತರಿಸುತ್ತಿದ್ದಾರೆ. ಆದರೆ ಇದುವರೆಗೆ ಮುಳುಗಡೆ ಗ್ರಾಮವಾಗಿ ಘೋಷಣೆ ಮಾಡದಿರುವುದು ವಿಪರ್ಯಾಸ.
ತಾಲೂಕಿನ ಯಗಚಿ ಜಲಾಶಯ ಹಿನ್ನೀರಿನ ವ್ಯಾಪ್ತಿಯಲ್ಲಿ ಬರುವ ನಾರಾಯಣಪುರ ಕೆಳಹಳ್ಳಿ ಗ್ರಾಮ ಸೇರಿದಂತೆ ಬಹುತೇಕ ಕಡೆ ನಡೆದಿರುವ ಅಭಿವೃದ್ಧಿ ಮೇಲ್ನೋಟಕ್ಕೆ ಮಾತ್ರ ಕಾಣುತ್ತವೆ. ಯಗಚಿ ಹಿನ್ನೀರಿನ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಗಳಲ್ಲಿ ಬೇಸಿಗೆ ಬಂದರೆ ಕುಡಿಯುವ ನೀರಿಗೆ ಹಾಹಾಕಾರವಿದೆ. ಇನ್ನು ಮಳೆಗಾಲ ಬಂದರೆ ಹಿನ್ನೀರಿನಿಂದಾಗಿ ಇಡೀ ಗ್ರಾಮ ಶೀತಪೀಡಿತವಾಗುತ್ತದೆ. ಗ್ರಾಮದಲ್ಲಿ ಕೊಳವೆ ಬಾವಿಗಳಿದ್ದೂರ ಅವು ದುರಸ್ತಿಯಲ್ಲಿವೆ.
ಸುವರ್ಣ ಗ್ರಾಮದ ಯೋಜನೆಯಡಿ ನಾರಾಯಣಪುರ ಕಾಲೋನಿ ರಸ್ತೆಯನ್ನು ಸಿಮೆಂಟ್ ರಸ್ತೆಯಾಗಿ ಪರಿವರ್ತಿಸಲಾಗಿದೆ. ಆದರೆ, ಕಾಮಗಾರಿ ಮಾತ್ರ ಕಳಪೆ. ಕಸ ವಿಲೇವಾರಿಗೆ ಸಿಮೆಂಟ್ ತೊಟ್ಟಿಗಳನ್ನಿಡಲಾಗಿದೆ. ಆದರೆ, ಅವುಗಳನ್ನು ಇದುವರೆಗೂ ಉಪಯೋಗಿಸಿಲ್ಲ. ನೂತನ ಗ್ರಾಪಂ ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಪುಂಡ ಪೋಕರಿಗಳ ತಾಣವಾಗಿದೆ. ಸಮುದಾಯ ಭವನವನ್ನು ನಿರ್ಮಿಸಿದ್ದರೂ ಉದ್ಘಾಟನೆಯ ಭಾಗ್ಯ ದೊರೆತಿಲ್ಲ. ಇನ್ನು ಗ್ರಂಥಾಲಯ ಎಂಬುದು ನೆಪ ಮಾತ್ರಕ್ಕೆ ಇದೆ. ಇಲ್ಲಿಗೆ ದಿನಪತ್ರಿಕೆಗಳು ಬಂದು ಅದೆಷ್ಟೋ ವರ್ಷಗಳಾಗಿವೆ. ಕಂಪ್ಯೂಟರ್ ಆಪರೇಟರ್ ವಾರಕ್ಕೆ ಒಮ್ಮೆ ಮಾತ್ರ ಕೆಲಸಕ್ಕೆ ಬರುತ್ತಿದ್ದು, ಅವರನ್ನು ಕಾಣಬೇಕೆಂದರೆ ಬೇಲೂರು ಪಟ್ಟಣಕ್ಕೆ ಹೋಗಬೇಕು! ಗ್ರಾಮದ ಮನೆಗಳ ಪೈಕಿ ಶೇ.40ರಷ್ಟು ಮನೆಗಳಿಗೆ ಶೌಚಾಲಯವಿಲ್ಲ.
ಕೆಳಹಳ್ಳಿ ಗ್ರಾಮದ ಜನರ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಮಳೆಗಾಲ ಎಂಬುದು ಇವರ ಪಾಲಿಗೆ ಶಾಪವಾಗಿದೆ. ಹಿನ್ನೀರಿನ ಶೀತಗಾಳಿ, ಮನೆಯ ಗೋಡೆಗಳು ಶೀತದಿಂದ ಕುಸಿದು ಬೀಳುವುದು, ಮನೆಗಳು ಶೀತಪೀಡಿತವಾಗಿದ್ದು, ಅಡುಗೆ ಮಾಡಲು ಒಲೆ ಉರಿಯುವುದಿಲ್ಲ. ಜಾನುವಾರುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಲು ಆಗದೆ ಶಾಲೆಯ ಆವರಣದಲ್ಲಿ ಕಟ್ಟಬೇಕು. ಮಳೆಗಾಲದಲ್ಲಿ ಗಂಜಿ ಕೇಂದ್ರ ತೆರೆಯುವ ತಾಲೂಕು ಆಡಳಿತ ನಂತರ ಮತ್ತೆ ಇತ್ತ ತಲೆ ಹಾಕುವುದಿಲ್ಲ. ಇಲ್ಲಿನ ರಸ್ತೆ ಸಂಪೂರ್ಣ ಹಾಳಾದೆ.