ಅತ್ಯಾಚಾರ, ದೌರ್ಜನ್ಯ ಹೆಚ್ಚಳ: ಕ್ರಮಕ್ಕೆ ಸೂಚನೆ
ಹಾಸನ: ಇತ್ತೀಚಿನ ದಿನಗಳಲ್ಲಿ ಜಿಲ್ಲಾದ್ಯಂತ ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳನ್ನು ಪೊಲೀಸರು ತಡೆಯಬೇಕೆಂದು ಗೃಹ ಸಚಿವ ಕೆ.ಜೆ. ಜಾರ್ಜ್ ಅವರು ಹೇಳಿದರು.
5 ತಿಂಗಳಲ್ಲಿ 15 ಮಹಿಳೆಯರ ಮೇಲೆ ಅತ್ಯಾಚಾರ ನಡೆದ ಬಗ್ಗೆ ವರದಿಯಾಗಿದೆ. ಇದು ನಿಜಕ್ಕೂ ಆತಂಕಕಾರಿ. ಕೂಡಲೇ ಇದನ್ನು ತಡೆಯಬೇಕಾದ ಜವಾಬ್ದಾರಿ ಪೊಲೀಸ್ ಮೇಲಿದೆ ಎಂದು ಎಚ್ಚರಿಸಿದರು. ಸೋಮವಾರ ಇಲ್ಲಿನ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ ಎಂದು ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1 ಲಕ್ಷ ಪರಿಹಾರ: ಅರಕಲಗೂಡು ತಾಲೂಕಿನಲ್ಲಿ ಅಪ್ಪನಿಂದಲೇ ಅತ್ಯಾಚಾರಕ್ಕೆ ಈಡಾಗಿ ಗರ್ಭಿಣಿ ಆಗಿರುವ ಬಾಲಕಿಗೆ ಒಂದು ಲಕ್ಷ ರುಪಾಯಿ ಪರಿಹಾರ ನೀಡಲಾಗುವುದು. ಅದರಲ್ಲಿ 50 ಸಾವಿರ ಅನ್ನು ಬ್ಯಾಂಕಿನಲ್ಲಿ ಆಕೆಯ ಭವಿಷ್ಯದ ದೃಷ್ಟಿಯಿಂದ ಠೇವಣೆ ಇಡಲಾಗುವುದು. ಆಕೆಗೆ ಗರ್ಭಪಾತ ಮಾಡಿಸುವ ವಿಚಾರ ಕಾನೂನಿಗೆ ಸಂಬಂಧಪಟ್ಟ ವಿಚಾರ ಎಂದು ಹೇಳಿದರು.
ಠಾಣೆಗಳಲ್ಲಿ ಯಾರು ಕೆಲಸ ಮಾಡುವುದಿಲ್ಲವೋ ಅಥವಾ ಅಂಥ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ಎಸ್ಪಿಗೆ ಸೂಚಿಸಲಾಗಿದೆ. ಠಾಣೆಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಪ್ರಕರಣಗಳನ್ನು ಕೂಡಲೇ ದಾಖಲಿಸಿಕೊಂಡು ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುವಂತೆ ಮಾಡಬೇಕು ಎಂದರು.