ಕೆರೆ ಹೂಳೆತ್ತುವುದಕ್ಕೆ ದಸಂಸ ಆಗ್ರಹ
ಸಕಲೇಶಪಪುರ: ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ ಹೂಳು ತೆಗೆಯುವ ಕಾಮಗಾರಿಯನ್ನು ಜೆಸಿಬಿ ಯಂತ್ರದಲ್ಲಿ ತೆಗೆಯುವ ಮೂಲಕ ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದಲಿತ ಸಂಘರ್ಷ ಸಮಿತಿಯ ಪ್ರಮುಖ ದಿಣ್ಣೆಕೇರೆ ಶೇಖರ್ ಒತ್ತಾಯಿಸಿದ್ದಾರೆ. ತಾಲೂಕಿನ ಉದಯವಾರ ಗ್ರಾಪಂ ವ್ಯಾಪ್ತಿಯ ಬಾಳಗೂಡು ಊರು ಕೇರೆ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆರೆ ಹೂಳು ತೆಗೆಯುವ ಕಾಮಗಾರಿಗೆ 14.75 ಲಕ್ಷ ರು. ಮಂಜೂರಾಗಿದ್ದು, ಈ ಕಾಮಗಾರಿಯನ್ನು ಮಾನವರಿಂದ ನೆರವೇರಿಸದೆ ಯಂತ್ರದ ಮೂಲಕ ತೆಗೆದು ಬಾರಿ ಅವ್ಯವಹಾರ ನಡೆಸಿದ್ದಾರೆ ಎಂದು ಅರೋಪಿಸಿದ್ದಾರೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ರೂಪಿಸಿರುವುದೇ ಮಾನವ ಸಂಪನ್ಮೂಲದ ಬಳೆಕೆಗಾಗಿ. ಆದರೆ ಜನರನ್ನು ವಂಚಿಸಿ ಕಾನೂನು ಉಲ್ಲಂಘಿಸಿ ಯಂತ್ರದ ಮೂಲಕ ಕಾಮಾಗಾರಿ ಮಾಡಲಾಗುತ್ತಿದೆ. ಊರಿನ ಗ್ರಾಮಸ್ಥರು ಜೆಸಿಬಿಯ ವಿಡಿಯೋ ಚಿತ್ರೀಕರಿಸಿದ್ದು ಈ ದಾಖಲೆ ಸಮೇತ ತಿಳಿಸಿದ್ದರೂ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಅಧಿಕಾರಿಗಳು ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದ್ದಾರೆ. ಅಧಿಕಾರಿಗಳು ಕೂಡಲೇ ಕಾಮಗಾರಿಯನ್ನು ನಿಲ್ಲಿಸಬೇಕು ಹಾಗೂ ಈವರೆಗೆ ನಡೆದಿರುವ ಕಾಮಾಗಾರಿಯ ಬಿಲ್ ಹಣ ಪಾವತಿಸಬಾರದು ಎಂದು ದಿಣ್ಣೆ ಕೇರೆ ಶೇಖರ್ ಒತ್ತಾಯಿಸಿದ್ದಾರೆ