ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಸಿಪಿಎಂ ಪ್ರತಿಭಟನೆ
ಹಾಸನ: ಅಸ್ಪೃಶ್ಯತೆ, ಜಾತಿ ತಾರತಮ್ಯ ಆಚರಣೆ ಹಾಗೂ ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ಸಿಪಿಎಂ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಅಸ್ಪೃಶ್ಯತೆ, ಜಾತಿ ಲಿಂಗ ತಾರತಮ್ಯ ಆಚರಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕ್ರೂರ ಆಚರಣೆಗಳಾದ ದೇವಾಲಯ ಪ್ರವೇಶ ನಿಷೇಧ, ಪಂಕ್ತಿಭೇದ, ಮಡೆಸ್ನಾನದಂಥ ಆಚರಣೆ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಸಮಾಜದ ಸ್ಥಿತಿ ಅರಿವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಗತಿಪರ ಮಠಾಧೀಶರ ವೇದಿಕೆಯಿಂದ ಮಾನವತೆಯಡೆಗೆ ನಮ್ಮ ನಡಿಗೆ ಎಂಬ ಘೋಷಣೆಯಡಿ ಬಸವ ಕಲ್ಯಾಣದಲ್ಲಿ ಅಸ್ಪಶ್ಯತೆ, ಜಾತಿ ತಾರತಮ್ಯ ವಿರುದ್ಧ 12 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ಹೋರಾಟ ಬೆಂಬಲಿಸಿ ನಾವುಗಳು ಪ್ರತಿಭಟನೆ ಮಾಡುತ್ತಿರುವುದಾಗಿ ಸಿಪಿಎಂ ಮುಖಂಡ ಧರ್ಮೇಶ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಸಾಹಿತಿ ಜ.ಹೊ. ನಾರಾಯಣಸ್ವಾಮಿ, ರೈತ ಸಂಘದ ಮುಖಂಡ ಕೊಟ್ಟೂರ್ ಶ್ರೀನಿವಾಸ್, ನಾಯಕರಹಳ್ಳಿ ಜಯರಾಂ ಇತರರು ಇದ್ದರು.