ಬೀಜೋಪಚಾರ
ಉದಯಪುರ (ಚನ್ನರಾಯಪಟ್ಟಣ ತಾ.): ತಾಲೂಕಿನ ಉದಯಪುರದಲ್ಲಿ ಭೂಚೇತನ ಯೋಜನೆಯಡಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ, ಉದಯಪುರ ವತಿಯಿಂದ ಹೋಬಳಿ ಮಟ್ಟದ ರೈತ ತರಬೇತಿ ಹಾಗೂ ಬೀಜೋಪಚಾರ ಆಂದೋಲನ ಕಾರ್ಯಕ್ರಮ ನಡೆಯಿತು. ಕೃಷಿ ಮಹಾವಿದ್ಯಾಲಯ ಕಾರೇಕೆರೆಯ ರೋಗಶಾಸ್ತ್ರ ತಜ್ಞ ಡಾ.ನಾಗರಾಜು ವಿವಿಧ ಬೆಳೆಗಳಿಗೆ ತಗಲುವ ರೋಗ, ಕೀಟಗಳು, ಅವುಗಳನ್ನು ಹತೋಟಿ ಮಾಡುವ ಕ್ರಮ, ಬಳಸಬೇಕಾದ ಔಷಧಿಗಳು ಅದರ ಪ್ರಮಾಣ ಹಾಗೂ ಬೀಜೋಪಚಾರದ ಉದ್ದೇಶ ಹಾಗೂ ಮಹತ್ವ ತಿಳಿಸಿದರು. ಬೇಸಾಯ ತಜ್ಞ ಡಾ.ಮಂಜುನಾಥ ಮಾತನಾಡಿ, ನಾನಾ ಬೆಳೆಗಳು, ಅದರ ತಳಿಗಳು, ಯಾವ ತಳಿಗಳ ಬಿತ್ತನೆ ಕಾಲ, ಅವುಗಳ ಅಂತರ, ಇಳುವರಿ ಹಾಗೂ ಲಘುಪೋಷಕಾಂಶಗಳ ಬಳಕೆ ಜೊತೆಗೆ ಭೂಮಿ ಚೇತನಗೊಳ್ಳಲು ಲಘುಪೋಷಕಾಂಶಗಳು ಅವಶ್ಯಕ ಎಂದು ತಿಳಿಸಿದರು. ತಾಲೂಕು ಪಂಚಾಯ್ತಿ ಅಧ್ಯಕ್ಷೆ ಹೇಮಾವತಿ ಕೃಷ್ಣನಾಯಕ್ ಉದ್ಘಾಟಿಸಿದರು. ತಾಲೂಕು ಪಂಚಾಯ್ತಿ ಸದಸ್ಯರಾದ ದೇವೇಗೌಡ, ರವೀಶ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜಯಲಕ್ಷ್ಮಮ್ಮ ಶಾಂತರಾಜ್, ಬರಗೂರು ಗ್ರಾಮ ಘಟಕದ ರೈತ ಸಂಘದ ಅಧ್ಯಕ್ಷ ರಾಮದಾಸ್ ಇದ್ದರು. ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಮಲ್ಲೇಶಗೌಡ, ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಶ್ಮಿ, ಮಾತನಾಡಿದರು. ಆತ್ಮ ಯೋಜನೆ ಅಧಿಕಾರಿ ಗುರುದತ್ ವಂದಿಸಿದರು.