ಸುಳ್ಳು ಖಾತೆ ರದ್ದು ಮಾಡಲು ಒತ್ತಾಯ
ಕನ್ನಡಪ್ರಭ ವಾರ್ತೆ, ಹಾಸನ, ಜೂ. 9
ಸುಳ್ಳು ಖಾತೆ ರದ್ದು ಮಾಡಿ ನಿಜವಾದ ಸ್ವಾಧೀನದಾರರಿಗೆ ಖಾತೆ ಮಾಡಿಸಿಕೊಡುವಂತೆ ಆಗ್ರಹಿಸಿ ಬೇಲೂರು ತಾಲೂಕಿನ ಗೋವಿನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಸಬಾ ಹೋಬಳಿ ಯಮಸಂದಿ ಗ್ರಾಮ ಪಂಚಾಯ್ತಿಗೆ ಸೇರಿದ ಗೋವಿನಹಳ್ಳಿ ಗ್ರಾಮದ ಸರ್ವೆ ನಂಬರ್ 58ಣ4 ರಲ್ಲಿ ಪಿತ್ರಾರ್ಜಿತ ಜಮೀನು ಇದ್ದು, ಯಗಚಿ ಜಲಾಶಯ ನಿರ್ಮಾಣಕ್ಕೆಂದು ವಶಪಡಿಸಿಕೊಳ್ಳಲಾಗಿದೆ. ಪರ್ಯಾಯವಾಗಿ ಸರ್ವೆ ನಂಬರ್ 124ರಲ್ಲಿ 4 ಎಕರೆ ಜಮೀನನ್ನು ಮುಳುಗಡೆ ಪತ್ರದ ಆಧಾರದ ಮೇಲೆ ಮೌಖಿಕವಾಗಿ ಅಂದಿನ ತಹಸೀಲ್ದಾರ್ ಉಳುಮೆ ಮಾಡಲು ಆದೇಶ ಮಾಡಿದ್ದರು. ಕಲ್ಲು ಬಾವಿ ಕೊರೆಸಿ ಬೆಳೆ ಬೆಳೆದುಕೊಂಡು ಬರಲಾಗಿದೆ ಎಂದರು.
ಅದೇ ಗ್ರಾಮದ ಸಿದ್ದಯ್ಯ ಎಂಬುವರು ಈ ಭೂಮಿ ನನಗೆ ಸೇರಿದೆ ಎಂದು ವಿನಾಕಾರಣ ಜಗಳ ತೆಗೆದು ಬೆಳೆ ನಾಶ ಮಾಡಿದ್ದಾರೆ ಎಂದು ದೂರಿದರು.
ಪೊಲೀಸ್ ಠಾಣೆಗೆ ದೂರು ನೀಡಿ ಪ್ರತಿನಿತ್ಯ ತೊಂದರೇ ಕೊಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಅದೇ ರೀತಿ ಸಂಬಂಧಪಟ್ಟ ಅಧಿಕಾರಿಗಳು ಕೂಡ ಸ್ಥಳ ಪರಿಶೀಲಿಸದೆ ಸಿದ್ದಯ್ಯ ಹೆಸರಿಗೆ ಸುಳ್ಳು ಖಾತೆ ಸೃಷ್ಟಿ ಮಾಡಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಸುಳ್ಳು ಖಾತೆಯನ್ನು ರದ್ದುಗೊಳಿಸಿ ಸ್ವಾಧೀನದಾರರಿಗೆ ನಿಜವಾದ ಖಾತೆ ಮಾಡಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಈರಯ್ಯ, ಮಹೇಶ್, ನಾಗರಾಜ್ ಇತರರು ಇದ್ದರು.