ಪರಿಸರ ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯ
ರಾಮನಾಥಪುರ: ಮಾನವರು ತಮ್ಮ ಜೀವಿತ ಕಾಲದಲ್ಲಿ ಆರೋಗ್ಯವಂತರಾಗಿರಲು ತಮ್ಮ ಸುತ್ತಮುತ್ತಲ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ಕೊಣನೂರಿನ ಬಿ.ಎಸ್.ಎಸ್. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಬಿ.ಪಿ ತಿಪ್ಪೇಸ್ವಾಮಿ ತಿಳಿಸಿದರು. ರಾಮನಾಥಪುರ ಹತ್ತಿರವಿರುವ ಕೊಣನೂರಿನಲ್ಲಿ ಪರಿಸರ ಜಾಗೃತಿ ಜಾಥಾಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಪರಿಸರದ ಬಗ್ಗೆ ಕಾಳಜಿ ವಹಿಸಿ ತಮ್ಮ ಸುತ್ತಮುತ್ತಲ ಪರಿಸರವನ್ನು ಸಂರಕ್ಷಿಸುವುದರೊಂದಿಗೆ ಇತರರಿಗೂ ಇದರ ಬಗ್ಗೆ ತಿಳಿಹೇಳಬೇಕು ಎಂದರು. ಆಯೋಜಕಿ ಜೀವ ವಿಜ್ಞಾನ ಶಿಕ್ಷಕಿ ತ್ರಿವೇಣಿ, ಶಿಕ್ಷಕರಾದ ರವಿಕುಮಾರ್, ಮಂಜಯ್ಯ, ಪೊನ್ನಪ್ಪ ಮುಂತಾದವರು ಜಾಥಾದಲ್ಲಿ ಪಾಲ್ಗೊಂಡಿದ್ದರು.