ಮೂರ್ತಿ, ಕಲ್ಬುರ್ಗಿ ಗಡಿಪಾರಿಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಹಾಸನ: ದೇವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಹಿರಿಯ ಸಾಹಿತಿಗಳಾದ ಡಾ. ಅನಂತಮೂರ್ತಿ ಮತ್ತು ಪ್ರೊ. ಕಲ್ಬುರ್ಗಿ ಅವರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಮಂಗಳವಾರ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಹೊರಟ ಪ್ರತಿಭಟನೆ ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಧರಣಿ ನಡೆಸಿದರು.
ಶಾಂತಿ ಕದಡುವ ಯತ್ನ: ಬೆಂಗಳೂರಿನ ವಿಜ್ಞಾನ ಭವನದಲ್ಲಿ ನಡೆದ ಮೌಢ್ಯ ಮುಕ್ತ ಸಮಾಜ ಮತ್ತು ಕರ್ನಾಟಕ ಮೂಡ ನಂಬಿಕೆ ಪ್ರತಿಬಂಧಕ ಕಾಯ್ದೆ, ಅನುಷ್ಠಾನ ಚರ್ಚೆ ಕಾರ್ಯಕ್ರಮದಲ್ಲಿ ಎಂ.ಎಂ. ಅನಂತಮೂರ್ತಿ ವಿಗ್ರಹಗಳ ಮೇಲೆ ಮೂತ್ರ ಮಾಡಿರುವುದು ತಪ್ಪಲ್ಲ ಎಂದು ಕಲ್ಬುರ್ಗಿ ಹೇಳಿಕೆ ನೀಡಿದ್ದಾರೆ. ಸಮಾಜದಲ್ಲಿ ಶಾಂತಿ ಕದಡುವ ಉದ್ದೇಶದಿಂದ ಇಂತಹ ಹೇಳಿಕೆ ಕೊಡಲಾಗಿದೆ ಎಂದು ದೂರಿದರು.
ಅನಂತ ಮೂರ್ತಿ ಮತ್ತು ಎಂ.ಎಂ. ಕಲ್ಬುರ್ಗಿ ಇವರನ್ನು ಕೂಡಲೇ ಬಂಧಿಸಿ ವಿಚಾರಣೆಗೆ ಒಳಪಡಿಸಿದರೇ ಹೇಳಿಕೆ ಹಿಂದಿರುವ ಸಮಾಜ ದ್ರೋಹಿಗಳ ಗುಂಪನ್ನು ಬಯಲಿಗೆಳೆಯಬಹುದು. ಇವರಿಬ್ಬರನ್ನು ಕೂಡಲೇ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಚನ್ನಕೇಶವ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೇಶ್, ವಿಜಿಕುಮಾರ್, ಶ್ರೀನಿವಾಸ್, ವೇಣುಗೋಪಾಲ್, ಪ್ರಶಾಂತ್ ಹೋಸಮನೆ ಇತರರು ಇದ್ದರು.