ರುದ್ರಭೂಮಿ ಅಭಿವೃದ್ಧಿಗೆ ರು. 70 ಲಕ್ಷ ಮಂಜೂರು
ಹಾಸನ: ನಗರದ ಗೊರೂರು ರಸ್ತೆಯಲ್ಲಿ ಇರುವ ಬಿಟ್ಟಗೋಡನಹಳ್ಳಿ ಸಮೀಪದ ರುದ್ರಭೂಮಿ ಅಭಿವೃದ್ಧಿ ಮಾಡಲು 70 ಲಕ್ಷ ರು.ಗಳ ಮಂಜೂರಾಗಿದ್ದು, ಜೂ. 12 ರಂದು ಅಭಿವೃದ್ದಿ ಕಾಮಗಾರಿ ಪೂಜೆ ನೆರವೇರಿಸುವುದಾಗಿ ರುದ್ರಭೂಮಿ ಅಭಿವೃದ್ಧಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಂಜುನಾಥಮೂರ್ತಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆಯ ಸಹಯೋಗದಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಕೊಲ್ಕತ್ತಾ, ಮುಂಬೈ ಮತ್ತು ತಮಿಳುನಾಡಿನ ಹಲವೆಡೆ ಈ ಹೊಸ ಯಂತ್ರ ಅಳವಡಿಕೆ ಮಾಡಿಕೊಳ್ಳಲಾಗಿದ್ದು, ಅವುಗಳನ್ನು ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ಈ ವ್ಯವಸ್ಥೆಯಿಂದ ಒಂದು ಗಂಟೆಯಲ್ಲಿ ಚಿತಾದಹನ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. 90-110 ಕೆಜಿ ಸೌದೆಯಲ್ಲಿ ಹೆಚ್ಚು ಶಾಖ ಶಕ್ತಿ ಉತ್ಪಾದನೆ ಮಾಡುವ ಮೂಲಕ 50-70 ನಿಮಿಷದಲ್ಲಿ ಚಿತಾದಹನ ಮಾಡಬಹುದು. ಪರಿಸರ ಸ್ನೇಹಿ ಈ ಯೋಜನೆಗೆ ನಿಶ್ಚಿಂತ ಎಂದು ಹೆಸರಿಡಲಾಗಿದೆ. ಮೃಪಟ್ಟ ಮಕ್ಕಳ ಚಿತಾ ದಹನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಚಿತಾದಹನಕ್ಕೆ ಬರುವ ಸಂಬಂಧಿಕರ ಪೂಜೆ-ಪುನಸ್ಕಾರಕ್ಕೆ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರುದ್ರಭೂಮಿ ಅಭಿವೃದ್ಧಿ ಸೇವಾ ಸಮಿತಿ ಮಾಜಿ ಅಧ್ಯಕ್ಷ ಕಸ್ತೂರಿ ರಂಗಾಚಾರ್, ಖಜಾಂಚಿ ಕೆ.ಪಿ.ಎಸ್.ಪ್ರಮೋದ್, ನಗರಸಭೆ ಸದಸ್ಯ ಪ್ರಸನ್ನಕೃಷ್ಣಮೂರ್ತಿ, ಸತ್ಯನಾರಾಯಣ ಇದ್ದರು.