ಆರೋಗ್ಯ ರಕ್ಷಣೆಗೆ ಉತ್ತಮ ಪರಿಸರ ಅಗತ್ಯ
ಅರಕಲಗೂಡು: ಪ್ರತಿಯೊಬ್ಬರೂ ಒಂದೊಂದು ಗಿಡ ಬೆಳೆಸಿ ತನ್ನ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಉತ್ತಮ ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ ತಿಳಿಸಿದರು.
ಪಟ್ಟಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕೋಟೆ ಸರ್ಕಾರಿ ಫ್ರೌಢಶಾಲೆ, ಆರ್ಕೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಐಟಿಐ ಕಾಲೇಜು, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮನೆಯ ಹಿತ್ತಲಲ್ಲಿ ಗಿಡಮೂಲಿಕೆ ಗಿಡಗಳನ್ನು ನೆಡುವುದರಿಂದ ಅದರ ಗಾಳಿಯಿಂದ ಆರೋಗ್ಯ ವೃದ್ಧಿಯಾಗುತ್ತದೆ. ಎಲ್ಲರೂ ಪರಿಸರ ದಿನ ಮಾತ್ರ ಗಿಡ ನೆಡಲು ಸೀಮಿತವಾಗಿರದೇ ನಿತ್ಯ ಮನೆಗೊಂದು ಮರ ನಾಡಿಗೊಂದು ವನ ಎಂಬಂತೆ ಗಿಡ, ಮರ ಬೆಳೆಸುವಲ್ಲಿ ಜಾಗೃತರಾಗಬೇಕು ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಹಡ್ಲಿಗೇರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಹೈನುಗಾರಿಕೆ ಅಧಿಕಾರಿ ಮೋಹನ್, ಒಕ್ಕೂಟ ಅಧ್ಯಕ್ಷ ರುಕ್ಮಿಣಿ, ಆರ್.ವಿ. ಕಣ್ಣನ್, ಸಂಸ್ಥೆಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.