ಜಿಲ್ಲೆಯ 255 ಹೆ. ನಲ್ಲಿ ಹಲಸು ಹುಲುಸು
ಹಾಸನ: ಜಿಲ್ಲೆಯಲ್ಲಿ ವೈವಿದ್ಯ ವಾತಾವರಣವಿದ್ದು, ಹಲಸು ಬೆಳೆಗೆ ಸೂಕ್ತವಾಗಿದೆ. ಚನ್ನರಾಯಪಟ್ಟಣ, ಅರಕಲಗೂಡು, ಅರಸೀಕೆರೆ ತಾಲೂಕಿನಲ್ಲಿ ಉತ್ತಮ ರುಚಿ ಹಣ್ಣುಗಳನ್ನು ಪಡೆಯಬಹುದಾಗಿದೆ.
ಜಿಲ್ಲೆ ವ್ಯಾಪ್ತಿಯಲ್ಲಿ ಸುಮಾರು 255 ಹೆಕ್ಟೇರ್ ಪ್ರದೇಶದಲ್ಲಿ ಹಲಸು ಬೆಳೆಯಲಾಗುತ್ತಿದ್ದು ಇದರ ಮೌಲ್ಯ ರು. 229.16 ಲಕ್ಷ. ಇಳುವರಿ 11458 ಟನ್ ಇದೆ ಎಂದು ಕಂದಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳಾದ .ಟಿ.ಎಸ್.ಮಂಜುನಾಥಸ್ವಾಮಿ, ಡಾ.ಎಸ್.ಚನ್ನಕೇಶವ, ಡಾ.ಜಿ.ಎಸ್.ಕೃಷ್ಣಾರೆಡ್ಡಿ, ಡಾ.ಪಂಕಜ.ಹೆಚ್.ಕೆ ಮತ್ತು ಡಾ.ಬಿ.ಎಸ್.ಬಸವರಾಜು ತಿಳಿಸಿದ್ದಾರೆ.
ಆರೋಗ್ಯಕ್ಕೆ ಸಹಕಾರಿ: ಹಲಸಿನಲ್ಲಿ ಇರುವ ನಾರಿನ ಅಂಶ ನಮ್ಮ ಜಠರ, ಚಿಕ್ಕಕರಳು, ದೊಡ್ಡ ಕರಳನ್ನು ತೊಳೆದು ಶುದ್ಧಿ ಮಾಡುವ ಸಾಮರ್ಥ್ಯ ಹೊಂದಿದ್ದು, ಜೀರ್ಣಕ್ರಿಯೆ ಉತ್ತಮವಾಗಿಸಿ ಮಲ-ಮೂತ್ರ ವಿಸರ್ಜನೆ ಸರಾಗವಾಗಿಸುತ್ತದೆ. ಹಣ್ಣಿನಲ್ಲಿರುವ ಅಧಿಕ ಪೊಟ್ಯಾಷಿಯಂ, ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ವಿಟಮಿನ್, ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಎಲ್ಲಾ ಕಾಲದಲ್ಲೂ ಹಸಿರಾಗಿದ್ದು ನೀರಿನ ಅಭಾವವಿದ್ದರು ಕೂಡ ಫಸಲು ನೀಡುವ ಹಲಸು ಲಾಭದಾಯಕ. ಇದರಲ್ಲಿ ತಳಿಗಳ ಆಯ್ಕೆಯಿಂದ ಹೆಚ್ಚು ಇಳುವರಿ ಗಳಿಸಬಹುದಾಗಿದ್ದು, ಸುಧಾರಿತ ತಳಿಗಳ ಜೊತೆಗೆ ಸಾರ್ವಜನಿಕರು, ಬೆಳೆಗಾರರು, ಗ್ರಾಹಕರು ಕೆಲವು ವಿಶಿಷ್ಟ ಮರಗಳನ್ನು ಗುರುತಿಸಿದ್ದು, ಅವುಗಳಲ್ಲಿ ಪ್ರಮುಖವದವುಗಳು ಸ್ವರ್ಣ ಹಲಸು, ಪಾಲೂರು-1, ಪೆಚಿಪಾರಾಯ-1, ಕೊಂಕಣ್ ಪ್ರಾಲಿಫಿಕ್ ಸುಧಾರಿತ ತಳಿಗಳಾಗಿರುತ್ತದೆ ಎಂದು ಹೇಳಿದ್ದಾರೆ.
ನಾಟಿ ಕಾಲ ಮತ್ತು ಸಸಿಪಾಲನೆ:
ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿ ಜೂನ್, ಜುಲೈ ತಿಂಗಳು ನಾಟಿ ಮಾಡಲು ಅತಿ ಹೆಚ್ಚು ಸೂಕ್ತ ಅಧಿಕ ಮಳೆ ಬೀಳುವ ಪ್ರದೇಶಗಳಲ್ಲಿ ಆಗಸ್ಟ್ ಸೆಪ್ಟೆಂಬರ್‌ನಲ್ಲಿ ನಾಟಿ ಮಾಡಬಹುದು. ನಾಟಿಗೆ 10 ಮೀ 10 ಮೀ ಅಂತರದಲ್ಲಿ ಒಂದು ಘನ ಮೀಟರ್ ಅಳತೆಯ ಗುಂಡಿಗಳನ್ನು ತೆಗೆದು ಅದರಲ್ಲಿ 25-50 ಕೆ.ಜಿ. ಕೊಟ್ಟಿಗೆ ಗೊಬ್ಬರ ತುಂಬಿ ಒಂದು ತಿಂಗಳು ಕೊಳೆಯಲು ಬಿಟ್ಟು ನಂತರ ಗುಂಡಿಯ ಮಧ್ಯ ಭಾಗದಲ್ಲಿ ಕಸಿಮಾಡಿದ ಗಿಡಗಳನ್ನು ಕಸಿ ಮಾಡಿದ ಭಾಗ ಭೂಮಿಯ ಅಳತೆಯ ಮೆಲೆ ಇರುವಂತೆ ನಾಟಿ ಮಾಡಿ ಶಿಫಾರಸ್ಸು ಮಾಡಿದ ಗೊಬ್ಬರವನ್ನು ವರ್ಷಕ್ಕೆ ಎರಡು ಸಮಕಂತುಗಳಲ್ಲಿ ನೀಡಬೇಕು ಎಂದು ಹೇಳಿದ್ದಾರೆ.