ಮೂರ್ತಿ, ಕಲ್ಬುರ್ಗಿ ಗಡಿಪಾರಿಗೆ ಆಗ್ರಹ
ಸಕಲೇಶಪುರ: ಹಿಂದು ಧರ್ಮದ ಬಗ್ಗೆ ಅವಹೇಳನವಾಗಿ ಬರೆದಿರುವ ಹಾಗೂ ಮಾತನಾಡಿರುವ ಯು.ಆರ್. ಅನಂತಮೂರ್ತಿ ಹಾಗೂ ಕಲ್ಬುರ್ಗಿ ಅವರನ್ನು ಗಡೀಪಾರಿಗೆ ಒತ್ತಾಯಿಸಿ ವಿಹಿಪ ಹಾಗೂ ಬಜರಂಗದಳ ಕಾರ್ಯಕರ್ತರು ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬುದ್ದಿಜೀವಿ ಎನ್ನಿಸಿಕೊಳ್ಳುತ್ತಿರುವ ಕೆಲವು ವ್ಯಕ್ತಿಗಳು ಹಿಂದು ಧರ್ಮ ಹಾಗೂ ಹಿಂದೂ ದೇವರ ಬಗ್ಗೆ ಅವಹೇಳನಮಾಡುವುದನ್ನೇ ರೂಢಿಯಾಗಿಸಿಕೊಂಡಿದ್ದು, ಪ್ರಚಾರಕ್ಕಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಮಾಡುವ ಹೇಳಿಕೆ ನೀಡುತ್ತಿದ್ದಾರೆ. ಇವರು ನಿಜವಾದ ಬುದ್ದಿಜೀವಿಗಳು ಅಥಾವ ವಿಮರ್ಶಕರಾದರೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮದ ಬಗ್ಗೆ ಅಧ್ಯಯನ ಮಾಡಿ ತಮ್ಮ ಅನಿಸಿಕೆಯನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲಿ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಬಜರಂಗದಳದ ಪ್ರಾಂತ ಸಂಚಾಲಕ ರಘು, ಸಂತೋಷ್, ವಿಜಯಕುಮಾರ್, ಸಂದೇಶ್ ಇತರರು ಇದ್ದರು.
ಕೀಳುಮಟ್ಟದ ಪ್ರಚಾರ: ಟೀಕೆ
ಹೊಳೆನರಸೀಪುರ:ನಾಡಿನ ವಿಚಾರವಂತರುಗಳಲ್ಲಿ ಒಬ್ಬರೆನಿಸಿದ ಕಲ್ಬುರ್ಗಿಯವರ ಮಾತುಗಳು ಹಾಗೂ ಅವರ ಆಲೋಚನೆಗಳು ಭಾರತೀಯರ ನಂಬಿಕೆ ಹಾಗೂ ಮನಸ್ಸಿನ ಮೇಲೆ ಆಕ್ರಮಣ ಮಾಡಿದ್ದು, ಕೀಳು ಮಟ್ಟದ ಪ್ರಚಾರದಿಂದ ಜನಪ್ರಿಯತೆ ಗಳಿಸುವ ಭರದಲ್ಲಿ ಅವರು ಹೀಗೆ ಮಾತನಾಡಿದ್ದಾರೆ ಎಂದು ಲಯನ್ಸ್ ಕ್ಲಬ್ನ ಖಜಾಂಚಿ ಎಂ.ಎನ್. ಜೈಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
ಆಧ್ಯಾತ್ಮದ ಬುನಾದಿಯ ಮೇಲೆ ನಿರ್ಮಿತವಾಗಿರುವ ಭಾರತೀಯ ಸಂಸ್ಕೃತಿಯು ಸಾಂಸ್ಕೃತಿಕ ಬೃಹತ್ ಭಾರತದ ವಿಕಸನಕ್ಕೆ ಕಾರಣವಾಗಿದೆ ಎಂಬ ಸತ್ಯವನ್ನು ನಮ್ಮ ನಾಡಿನ ವಿಚಾರವಂತರು ಎನಿಸಿಕೊಂಡವರು ಎಂದಿಗೂ ಮರೆಯಬಾರದು. ನಮ್ಮ ಪೂರ್ವಿಕರಿಂದ ಪರಂಪರಾನುಗತವಾಗಿ ಹರಿದು ಬಂದ ಆಧ್ಯಾತ್ಮದ ಭಿನ್ನ ಭಿನ್ನ ಸಂಸ್ಕಾರಗಳು ಆಧುನಿಕತೆಯ ಅಬ್ಬರದ ನಡುವೆಯೂ ಭಾರತೀಯರಲ್ಲಿ ನೆಲೆಗೊಂಡಿರಲು ಕಾರಣವಾಗಿರುವುದು ನಮ್ಮಲ್ಲಿನ ನಂಬಿಕೆ, ಶ್ರದ್ಧೆ ಮತ್ತು ಭಕ್ತಿಯಿಂದಾಗಿ ಎಂದು ಹೇಳಿದ್ದಾರೆ.
ಈ ರೀತಿಯಾಗಿ ದೇವರುಗಳ ಮೇಲೆ ಕೀಳು ಮಟ್ಟದ ಪ್ರಚಾರಕ್ಕಾಗಿ ಬಾಯಿಗೆ ಬಂದಂತೆ ಮಾತನಾಡುವ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಅವರಂತೆಯೇ ವಿಚಾರವಂತರೆನಿಸಿಕೊಂಡಿರುವ ಕಲ್ಬುರ್ಗಿಯವರೂ ಕೀಳಾಗಿ ಉದಾಹರಣೆಗಳನ್ನು ಕೊಡುವುದನ್ನು ಈ ಕೂಡಲೇ ನಿಲ್ಲಿನ ನಾಡಿನ ಸಮಸ್ತ ಜನರ ಕ್ಷಮೆ ಕೋರಲಿ ಎಂದು ಅವರು ಆಗ್ರಹಿಸಿದ್ದಾರೆ.