ದೇಗುಲ ವಿವಾದ ಸುಖಾಂತ್ಯ
ಹಾಸನ: ಜಿಲ್ಲೆ ಅರಸೀಕೆರೆ ತಾಲೂಕು ಬಾಗೀವಾಳು ಗ್ರಾಮದ ಉಡುಸಲಮ್ಮ ದೇವಾಲಯಕ್ಕೆ ದಲಿತರು ಪ್ರವೇಶ ಮಾಡಿದ್ದರಿಂದ ಉಂಟಾಗಿದ್ದ ವಿವಾದ ಶನಿವಾರ ಸುಖಾಂತ್ಯ ಕಂಡಿದೆ. ಅಲ್ಲಿನ ದಲಿತ ಮುಖಂಡ ಮೋಹನ್ ಕುಮಾರ್ ದೇವಾಲಯ ಪ್ರವೇಶ ಮಾಡಿದ ಕಾರಣಕ್ಕೆ ದೇವಾಲಯ ಅಪವಿತ್ರವಾಗಿದೆ ಎಂದು ಎಣಿಸಿ ಕಳೆದ ಜೂ.10 ರಿಂದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಕ್ಕೆ ಬಿಗ ಜಡಿಯಲಾಗಿತ್ತು. ಈ ಸುದ್ದಿ ತಿಳಿದ ನಂತರ ಗ್ರಾಮಕ್ಕೆ ದೌಡಾಯಿಸಿದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪುರುಷೋತ್ತಮ ಮತ್ತು ಉಪ ವಿಭಾಗಾಧಿಕಾರಿ ಶರತ್ ಎಲ್ಲರಿಗೂ ಬುದ್ಧಿವಾದ ಹೇಳಿ, ವಿವಾದಕ್ಕೆ ತೆರೆ ಎಳೆದಿದ್ದಾರೆ. ಈ ಸಂದರ್ಭದಲ್ಲಿ ಮೋಹನ್ ಕುಮಾರ್ ಅವರನ್ನು ಮತ್ತೊಮ್ಮೆ ದೇವಾಲಯ ಪ್ರವೇಶ ಮಾಡಿಸಿದ ಅಧಿಕಾರಿಗಳು, ನಾಳೆಯಿಂದ ಉಡುಸಲಮ್ಮ ದೇವಾಲಯಕ್ಕೆ ದಲಿತರ ಪ್ರವೇಶವನ್ನು ಯಾರೂ ತಡೆಯುವುದಿಲ್ಲ. ಒಂದು ವೇಳೆ ಅಡೆತಡೆ ಮಾಡಿದರೆ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.