ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಯಾಗಲಿ: ನ್ಯಾ. ರಾಜೀವ ಗೌಡ
ಬೇಲೂರು: ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಬೇಲೂರು, ಕಾರ್ಮಿಕ ಇಲಾಖೆ ಬೇಲೂರು ಹಾಗೂ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ನ್ಯಾಯಾಧೀಶ ಇ.ರಾಜೀವಗೌಡ ಮಾತನಾಡಿ, ಇಂದು ಬಾಲಕಾರ್ಮಿಕ ಪದ್ಧತಿಯು ವಿಶ್ವ ವ್ಯಾಪ್ತಿ ಹಬ್ಬಿದ್ದು ಅದನ್ನು ಕೂಡಲೇ ನಿಷೇಧ ಮಾಡಬೇಕು ಎಂದು ಹೇಳಿದರು.
ಮಕ್ಕಳಿಗೆ ಸೌಲಭ್ಯ: ಕಾನೂನಿನ ಅಡಿಯಲ್ಲಿ ಶಾಶ್ವತವಾಗಿ ತೋಡೆದು ಹಾಕಬೇಕು. ಇಂದು ಬಾಲ ಕಾರ್ಮಿಕರು ವಿದ್ಯೆ ಮತ್ತು ಶಿಕ್ಷಣ ಸೌಲಭ್ಯ ಇಲ್ಲದೆ ಮಹಿಳೆ ಜೊತೆ ಅನುಚಿತವಾಗಿ ವರ್ತನೆ, ಕೊಲೆ ಪ್ರಕರಣ, ದರೋಡೆ, ಹೆಚ್ಚಾಗಿದೆ. ಆದ್ದರಿಂದ ಅವರಿಗೆ ಉಚಿತ ಶಿಕ್ಷಣ, ವಸತಿ ಸೌಲಭ್ಯವನ್ನು ಹಾಗೂ ಪ್ರತಿ ಜಿಲ್ಲೆಯಲ್ಲಿ ನಿಧಿ ಸಂಗ್ರಹ ಮಾಡಿ ಮಕ್ಕಳಿಗೆ ಸೌಲಭ್ಯ ಸರ್ಕಾರದಿಂದ ಕೊಡಿಸಬಹುದಾಗಿದೆ ಎಂದರು.
ವಕೀಲ ಶ್ರೀನಿಧಿ ಮಾತನಾಡಿ, ಬಡತನ ಹೊಟ್ಟೆಪಾಡಿಗಾಗಿ ಶ್ರೀಮಂತ ಮನೆಗಳಿಗೆ ಹೋಗಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಅವರು ಶಾಲೆ-ಶಿಕ್ಷಣ ಪಡೆದುಕೊಳ್ಳಬೇಕು, 14 ವರ್ಷ ಉಚಿತ ಶಿಕ್ಷಣವನ್ನು ರಾಜ್ಯ ಸರ್ಕಾರ ಸ್ವಂತ ಖರ್ಚಿನಲ್ಲಿ ನೋಡಿಕೊಳ್ಳುತ್ತಿದೆ ಎಂದು ಹೇಳಿದರು.
ಮೊರಾರ್ಜಿ ದೇಸಾಯಿ ಮಾದರಿ ಶಾಲೆಯ ಪ್ರಾಂಶುಪಾಲ ಸಂಪತ್ ರಾಜನ್, ವೆಂಕಟೇಶ್ ನಾಯಕ್, ಎಸ್. ಎನ್. ಲಿಂಗೇಶ್, ಮೋತಿಲಾಲ್ ಚೌಧರಿ, ಎಸ್.ಡಿ.ರಾಜೇಗೌಡ, ಸಿಎಂ ನಿಂಗರಾಜು, ಸಿ.ಸಿ.ಸೋಮೇಗೌಡ, ಶ್ರೀನಿಧಿ, ಅನಿಲ್, ಜಿಟಿ ಪ್ರಕಾಶ್,ಬಿ ಎಚ್. ರಾಜು, ಎ ಸಿ ದೇವರಾಜ್, ವೆಂಕಟೇಶ ನಾಯಕ ಇದ್ದರು.