ವೈದ್ಯನ ನಿರ್ಲಕ್ಷ್ಯ: ಮಹಿಳೆ ಕಾಲು ಊತ
ಆಲೂರು: ವೈದ್ಯನ ನಿರ್ಲಕ್ಷ್ಯದಿಂದ ಜಿಪಂ ಸದಸ್ಯರೊಬ್ಬರ ಪತ್ನಿಯ ಕಾಲು ತೀವ್ರವಾಗಿ ಊದಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಬೋಸ್ಮನಳ್ಳಿ ಗ್ರಾಮದ ಜಿಪಂ ಸದಸ್ಯ ಪುರುಷೋತ್ತಮ್ ಎಂಬವರ ಪತ್ನಿ ನಾಗರತ್ನ ಎಂಬಾಕೆ ರಾಯರ ಕೊಪ್ಪಲಿನ ಸರ್ಕಾರಿ ಆಸ್ಪತ್ರೆಗೆ ಜೂ.10 ಮಂಗಳವಾರ ಕಾಲು ನೋವೆಂದು ಬಂದಿದ್ದು, ಅಂದು ಡಾ.ಮೋಹನ್ ಎಂಬುವರು ಅವರಿಗೆ ಕಾಲಿಗೆ 2 ಹಾಗೂ ಸೊಂಟಕ್ಕೆ ಒಂದು ಇಂಜೆಕ್ಷನ್ ನೀಡಿದ್ದಾರೆ.
ಇಂಜೆಕ್ಷನ್ ನೀಡಿದ ತಕ್ಷಣ ಆಕೆಯ ಕಾಲು ಜೋಮು ಹಿಡಿದಂತಾಗಿದ್ದು ಆಕೆ ಪ್ರಶ್ನಿಸಿದಾಗ ಮೋಹನ್ ಎಲ್ಲಾ ಸರಿಯಾಗುತ್ತದೆ. ಮನೆಗೆ ಹೋಗಿ ರೆಸ್ಟೆ ತೆಗೆದುಕೊಳ್ಳಿ ಎಂದು ಹೇಳಿ ಕಳಿಸಿದ್ದಾರೆ. ಮನೆಗೆ ಬಂದ ನಂತರ ಕಾಲಿನಲ್ಲಿ ನೋವು ಹಾಗೂ ಊತದೊಂದಿಗೆ ತೀವ್ರವಾದ ಉರಿ ಶುರುವಾಗಿದ್ದು, ಕಾಲನ್ನು ಎತ್ತಲು ಸಾಧ್ಯವಾಗದೆ ಬುಧವಾರ ಆಕೆ ಆಸ್ಪತ್ರೆಗೆ ಬರಲಾಗಿಲ್ಲ. ಗುರುವಾರ ಮತ್ತೆ ಆಸ್ಪತ್ರೆಗೆ ಬಂದ ನಾಗರತ್ನ ತನಗೆ ತುಂಬಾ ತೊಂದರೆಯುಂಟಾಗಿದೆ ಎಂದು ಡಾ. ಮೋಹನ್ ಅವರಿಗೆ ತಿಳಿಸಿದಾಗ ಆತ ಮತ್ತೆ ಆಕೆಗೆ ಗ್ಲೂಕೋಸ್ ಕೊಟ್ಟು ಸೊಂಟಕ್ಕೆ ಒಂದು ಇಂಜೆಕ್ಷನ್ ಹಾಗೂ ಕೈಗೆ ಒಂದು ಟೆಸ್ಟಿಂಗ್ ಇಂಜೆಕ್ಷನ್ ನೀಡಿದ್ದಾರೆ.
ನಂತರ ಮನೆಗೆ ಬಂದ ನಾಗರತ್ನರಿಗೆ ಊತ ಹಾಗೂ ನೋವು ಹೆಚ್ಚಾಗಿದ್ದು ಆಕೆ ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ.
ವೈದ್ಯರ ಉಡಾಫೆ ಮಾತು: ಸುದ್ದಿಗಾರರೊಂದಿಗೆ ಮಾತನಾಡಿದ ಪುರುಷೋತ್ತಮ್ ದಂಪತಿ ತಾವು ಅನುಭವಿಸಿದ ನೋವನ್ನು ಪತ್ರಿಕೆಯೊಂದಿಗೆ ತೋಡಿಕೊಂಡಿದ್ದು, ತಾವು ಹೋಗಿ ವೈದ್ಯನನ್ನು ಪ್ರಶ್ನಿಸಿದಾಗ ಉಡಾಫೆಯಿಂದ ಮಾತನಾಡಿದ ವೈದ್ಯ ನನ್ನನ್ನು ಏನೂ ಮಾಡಲಾಗುವುದಿಲ್ಲ ಎಂದು ಉತ್ತರಿಸಿದ್ದಾನೆ. ನಂತರ ನಾವು ಟಿ.ಎಚ್.ಓ ತಿಮ್ಮಯ್ಯಗೆ ದೂರು ನೀಡಿ ಹಾಸನಕ್ಕೆ ತೆರಳಿ ಡಿಎಚ್ಓಗೆ ದೂರು ನೀಡಿ ಗ್ರಾಮೀಣ ಭಾಗದ ಜನರ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿರುವ ಆ ವೈದ್ಯನನ್ನು ಶೀಘ್ರ ಅಲ್ಲಿಂದ ವರ್ಗಾವಣೆ ಮಾಡುವಂತೆ ಕೇಳಿಕೊಂಡಾಗ ಡಿಎಚ್ಓ ವೈದ್ಯರ ಕೊರತೆಯಿದೆಯೆಂದು ಸಬೂಬು ಹೇಳಿದ್ದಾರೆ.
ಈ ಡಾಕ್ಟರ್ ವಿರುದ್ಧ ಸಾಕಷ್ಟು ದೂರುಗಳು ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದ್ದು ಈ ಸಂಬಂಧವಾಗಿ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದು ಅವರು ಈ ಸಂಬಂಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ವರ್ಗಾವಣೆಗೆ ಪಿತೂರಿ ನಡೆದಿದೆ
ಈ ಸಂಬಂಧವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ಡಾ. ಮೋಹನ್, ನಾನು ಇಲ್ಲಿ ಅತ್ಯಂತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದು ನನ್ನನ್ನು ಇಲ್ಲಿಂದ ವರ್ಗಾವಣೆ ಮಾಡಿಸಲೆಂದೇ ಕೆಲವರು ಪಿತೂರಿ ನಡೆಸಿ ಈ ರೀತಿ ದೂರು ನೀಡಿದ್ದಾರೆ. ಇದರ ಹಿಂದೆ ಯಾರದೋ ಕುಮ್ಮಕ್ಕಿದೆ. ಇದರಲ್ಲಿ ನನ್ನ ತಪ್ಪಿಲ್ಲ ಕಳೆದ 3 ವರ್ಷದ ಹಿಂದೆ ಆಪರೇಶನ್ ಮಾಡಿಸಿಕೊಂಡಿದ್ದ ನಾಗರತ್ನರಿಗೆ ಅಂದಿನಿಂದಲೂ ಕಾಲು ನೋವಿತ್ತು. ನೋವು ಹೆಚ್ಚಾಗಿದೆಯೆಂದು ನನ್ನ ಬಳಿ ಬಂದಾಗ ನಾನು ಲೋಕಲ್ ಅನಸ್ತೇಶಿಯವನ್ನು ಕಾಲಿನ ನೋವಿದ್ದ ಭಾಗಕ್ಕೆ ನೀಡಿ ನೋವು ನಿವಾರಕವನ್ನು ಸೊಂಟಕ್ಕೆ ನೀಡಿ ಸ್ಕ್ಯಾನಿಂಗ್ ಮಾಡಿಸಲು ಹೇಳಿದ್ದೆ. ಇದು ಚಿಕ್ಕ ಸಮಸ್ಯೆಯಾಗಿದ್ದು ಅದನ್ನು ದೊಡ್ಡದು ಮಾಡುವ ಅವಶ್ಯಕತೆಯಿರಲಿಲ್ಲ. ಡಿಎಚ್ಒ ರಿಗೆ ನನ್ನ ಕಾರ್ಯ ನಿರ್ವಹಣೆ ಹಾಗೂ ಸಾಧನೆಯ ಬಗ್ಗೆ ವರದಿಯನ್ನು ನೀಡುವೆ. ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧ ಎಂದು ತಿಳಿಸಿದರು.