ಗೃಹಿಣಿ ಅನುಮಾನಾಸ್ಪದ ಸಾವು: ಪತಿ ಬಂಧನ
ರಾಮನಾಥಪುರ: ಸಮೀಪದ ಮಲ್ಲರಾಜಪಟ್ಟಣ ಗ್ರಾಮದ ಮನೆಯಲ್ಲಿ ಗೃಹಿಣಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆಯ ಸಾವಿಗೆ ಪತಿಯೇ ಕಾರಣ ಎಂದು ಪೋಷಕರು ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಮನಾಥಪುರ ಹೋಬಳಿ ವ್ಯಾಪ್ತಿಯ ಮಲ್ಲಿನಾಥಪುರದ ಮೂಡಲಗಿರಿ ಗೌಡರ ಪುತ್ರಿ ಉಷಾರಾಣಿ (27) ಸಾವನ್ನಪ್ಪಿದ ದುರ್ದೈವಿ. ಲಕ್ಕೂರಿನ ಬಾಲೇಗೌಡರ ಪುತ್ರ ಕುಮಾರ ಎಲ್.ಬಿ (35) ಎಂಬಾತನ ಜೊತೆ ಉಷಾರಾಣಿಯ ವಿವಾಹವಾಗಿತ್ತು. ಇವರಿಗೆ 3 ವರ್ಷದ ಗಂಡು ಮಗುವಿದೆ.
ಕುಮಾರ ಮತ್ತು ಉಷಾರಾಣಿ ನಡುವೆ ಹೊಂದಾಣಿಕೆ ಇರಲಿಲ್ಲ ಎನ್ನಲಾಗಿದೆ. ಸೋಮವಾರ ತಡರಾತ್ರಿ ತನ್ನ ಅತ್ತೆ ಮಾವನಿಗೆ ಕುಮಾರ ಪೋನ್ ಮಾಡಿ ಪತ್ನಿ ಉಷಾರಾಣಿ ಕಾಣುತ್ತಿಲ್ಲ. ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ.
ನೇಣಿಗೆ ಶರಣು: ಗಾಬರಿಗೊಂಡ ಪೋಷಕರು ಇವರು ವಾಸವಿದ್ದ ಮನೆಯತ್ತ ದೌಡಾಯಿಸಿದ್ದಾರೆ. ಅಲ್ಲಿ ಮನೆಯ ಕೋಣೆಯೊಂದರಲ್ಲಿ ಉಷಾರಾಣಿ ತನ್ನ ಸೀರೆಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿರುವುದು ಪತ್ತೆಯಾಗಿದೆ. ಆದರೂ ನೆಲದ ಮೇಲೆ ಕೆಲವು ಕಡೆ ಬಳೆಗಳು ಒಡೆದು ಬಿದ್ದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಪೋಷಕರು ಈಕೆಯ ಪತಿಯೇ ವರದಕ್ಷಿಣೆ ಕಿರುಕುಳ ನೀಡಿ ಹತ್ಯೆಗೈದಿದ್ದಾನೆ ಎಂದು ಕೊಣನೂರು ಪೋಲೀಸರಿಗೆ ದೂರು ನೀಡಿದ್ದು, ಎಎಸ್ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪತಿ ಕುಮಾರನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.