ದೇಗುಲ ಕಾಲುದಾರಿ ಒತ್ತುವರಿ ತೆರವಿಗೆ ಆಗ್ರಹ
ಹಾಸನ: ದೇವಸ್ಥಾನದ ಕಾಲುದಾರಿ ಒತ್ತುವರಿ ಮಾಡಲಾಗಿದ್ದು, 15 ದಿನಗಳಲ್ಲಿ ತೆರವುಗೊಳಿಸದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಸತ್ಯಮಂಗಲ ಗ್ರಾಪಂಗೆ ಸೇರಿದ ಗೌರಿಕೊಪ್ಪ ಗ್ರಾಮಸ್ಥರು ಎಚ್ಚರಿಸಿದ್ದಾರೆ. ನಗರ ಹೊರವಲಯದ ಗೌರಿಕೊಪ್ಪಲಿನಲ್ಲಿ ಕಳೆದ 5 ವರ್ಷಗಳ ಹಿಂದೆ ಶ್ರೀದೇವಿ ಆದಿಶಕ್ತಿ ಕಲಾವಿದ ಸಂಘದವರು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ನಿರ್ಮಿಸಿದ್ದರು.
ಭಕ್ತಾಧಿಗಳು ಈ ದೇವಾಲಯಕ್ಕೆ ಬರಲು ಒಂದೇ ದಾರಿ ಇತ್ತು. ಅದು ಖರಾಬು ಜಾಗವಾಗಿದೆ. ಈ ರಸ್ತೆ ಪಕ್ಕದ ಭೂಮಿ ಮಾಲೀಕರು ಆಕ್ರಮಿಸಿ ಈಗ ಆ ಸ್ಥಳದಲ್ಲಿ ಚರಂಡಿ ನೀರು ಹೋಗುವಂತೆ ಮಾಡುವ ಮೂಲಕ ಭಕ್ತರು ಓಡಾಡುವ ದಾರಿಗೆ ಅಡ್ಡಿಪಡಿಸಿದ್ದಾರೆ. ಈಗ ಭಕ್ತರು ಬೇಲಿ ಪಕ್ಕದಲ್ಲಿ ನಡೆದುಕೊಂಡು ಬಂದು ದೇವರ ದರ್ಶನ ಮಾಡುತ್ತಿದ್ದಾರೆ.
ಅಳತೆ ಮಾಡಿಸಿ: ಜಾಗದ ವಿಚಾರವಾಗಿ ಈ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೂ ಜಮೀನಿನ ಅಳತೆ ಮಾಡಿಸಲು ಮುಂದಾಗಿರುವುದಿಲ್ಲ ಎಂದು ದೇವಾಸ್ಥಾನದ ಅಧ್ಯಕ್ಷ ಸಿ. ಸೋಮಣ್ಣ, ರಾಮು, ಯೋಗೀಶ್, ವೆಂಕಟೇಶ್, ರಂಗಸ್ವಾಮಿ ಇತರರು ಆರೋಪಸಿದರು.