ಆಲೂಗೆ ಅಂಗಮಾರಿ: ಕ್ರಮಕ್ಕೆ ಸೂಚನೆ
ಕ.ಪ್ರ. ವಾರ್ತೆ ್ಣ ಹಾಸನ ್ಣ ಜೂ. 18
ವಾಣಿಜ್ಯ ಬೆಳೆ ಆಲೂಗೆ ಅಂಗಮಾರಿ ರೋಗ ತಡೆಗಟ್ಟುವುದು, ಕೈಕೊಟ್ಟ ಮುಂಗಾರು, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹಿನ್ನಡೆ, ಕುಡಿಯುವ ನೀರು ಪೂರೈಕೆ ಬಗ್ಗೆ ಚರ್ಚಿಸಿದ ಜಿಲ್ಲಾ ಪಂಚಾಯ್ತಿ ನೂತನ ಹಂಗಾಮಿ ಅಧ್ಯಕ್ಷ ಶಿವಶಂಕರ್ ಕುಂಟೆ ಈ ಸಮಸ್ಯೆಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಪಂಚಾಯ್ತಿ ನೂತನ ಹಂಗಾಮಿ ಅಧ್ಯಕ್ಷ ಶಿವಶಂಕರ್ಕುಂಟೆ ಅಧ್ಯಕ್ಷತೆಯಲ್ಲಿ ನಡೆಯಿತು.
ರೈತರಲ್ಲಿ ಅರಿವು ಮೂಡಿಸಿ: ಸಾಂಪ್ರದಾಯಕ ಬೆಳೆಯಾಗಿರುವ ಆಲೂಗೆಡ್ಡೆಯು ಜಿಲ್ಲೆಯ ಕೆಲವೆಡೆಗಳಲ್ಲಿ ಗಿಡ ಬರದೆ ಬೀಜ ಭೂಮಿಯೊಳಗೆ ಕರಗಿ ಹೋಗಿದೆ. ಗಿಡ ಬಂದಿರುವ ಕಡೆಗಳಲ್ಲಿ ಚಿಗುರೊಡೆಯುವ ಮುನ್ನ ಕಮರಿ ಹೋಗುತ್ತಿವೆ. ಜಿಲ್ಲೆಯ ಕೆಲವೊಂದು ಕಡೆಗಳಲ್ಲಿ ಆಲೂಗೆಡ್ಡೆ ಬಿತ್ತನೆ ಕಡಿಮೆಯಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದಕ್ಕಾಗಿ ಇಲಾಖೆಯ ಅಧಿಕಾರಿಗಳು ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಅಂಗಮಾರಿ ರೋಗದ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ಎಂದರು.
ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣಗೌಡ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡ ಸ್ವಾಮಿ ಮಾತನಾಡಿ, ಈಗಾಗಲೇ ಬಿತ್ತನೆಯಾಗಿರುವಂತಹ ಆಲೂಗೆಡ್ಡೆ ಬೆಳೆ ಬರದೆ ಕರಗಿ ಹೋಗಿವೆ. ರೈತರಿಗೆ ಸರಿಯಾದ ಬಿತ್ತನೆ ಬೀಜವನ್ನು ನೀಡದ ಕಾರಣ ಈಗ ಆಲೂಗೆಡ್ಡೆ ಮಣ್ಣಿನಲ್ಲೇ ಕರಗುತ್ತಿವೆ. ಇದಕ್ಕೆ ತೋಟಗಾರಿಕೆ ಇಲಾಖೆಯಿಂದ ಯಾವ ಕ್ರಮಕೈಗೊಳ್ಳಲಾಗಿದೆ ಎಂದ ಪ್ರಶ್ನಿಸಿದರು.
ಪರಿಹಾರ ಸೂಚಿಸಿ: ಹವಾಮಾನಾಧಾರಿತ ಬೆಳೆ ಬಗ್ಗೆ ರೈತರಿಗೆ ಕಾಲಕಾಲಕ್ಕೆ ಮಾಹಿತಿ ನೀಡಬೇಕು. ಬಿತ್ತನೆ ಆಲೂಗೆಡ್ಡೆಯನ್ನು ಸೂಕ್ತ ರೀತಿಯಲ್ಲಿ ಸಂಸ್ಕರಿಸದೆ ಮಾರಾಟ ಮಾಡಿರುವುದರಿಂದ ಸರಿಯಾಗಿ ಮೊಳಕೆಯೊಡೆಯದೆ ಕೆಲವು ರೈತರು ಕಂಗಾಲಾಗಿದ್ದಾರೆ. ಇದಕ್ಕಿರುವ ಪರಿಹಾರೋಪಾಯಗಳ ಬಗ್ಗೆಯೂ ಪ್ರಚಾರ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿ, ಜಿಲ್ಲೆಯಲ್ಲಿ 18 ಸಾವಿರ ಹೆಕ್ಚೇರ್ ಪ್ರದೇಶದಲ್ಲಿ ಆಲೂಗೆಡ್ಡೆ ಬಿತ್ತನೆಯಾಗಿದೆ. ಈಗಾಗಲೇ ಅಂಗಮಾರಿ ರೋಗದ ಬಗ್ಗೆ ಕರಪತ್ರಗಳ ಮೂಲಕ ರೈತರಿಗೆ ಅರಿವು ಮೂಡಿಸಲಾಗುತ್ತಿದೆ. ಅರಸೀಕೆರೆ, ಚನ್ನರಾಯಪಟ್ಟಣದಲ್ಲಿ ಆಲೂಗೆಡ್ಡೆ ಬಿತ್ತನೆ ಕಡಿಮೆಯಾಗಿದೆ. ಆಲೂಗೆಡ್ಡೆ ಬಗ್ಗೆ ರೈತರಿಗೆ ತಿಳಿವಳಿಕೆ ಮೂಡಿಸುವಂತಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮಳೆಯಾಗದಿದ್ದರೆ ಸಮಸ್ಯೆ: ಮಲೆನಾಡು ತಾಲೂಕುಗಳು ಸೇರಿದಂತೆ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯ ಕೊರತೆ ಎದುರಾಗಿದೆ. ಈಗಾಗಲೇ ಬಿತ್ತನೆಯಾಗಿರುವ ಆಲೂಗೆಡ್ಡೆ ಮತ್ತು ಮೆಕ್ಕೆಜೋಳಕ್ಕೆ ಸ್ವಲ್ಪ ಮಳೆಯ ಅವಶ್ಯಕತೆ ಇದೆ. ಉಳಿದಂತೆ ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯದವರೆಗೆ ನಾನಾ ರೀತಿಯ ಬೆಳೆಗಳ ಬಿತ್ತನೆ ಕಾರ್ಯ ನೆಡೆಯುತ್ತದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದಲ್ಲಿ ಸಮಸ್ಯೆ ತಲೆದೂರುತ್ತದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ರೀತಿಯ ಕೊರತೆ ಇಲ್ಲ ಎಂದರು.
ಇದೇ ರೀತಿ ತೋಟಗಾರಿಕೆ ಮತ್ತು ಜಲಾನಯನ ಅರಣ್ಯ ಹಾಗೂ ಇತರ ಇಲಾಖೆಗಳ ನಾನಾ ಯೋಜನೆಗಳಡಿ ರೈತರಿಗೆ ಸಕಾಲದಲ್ಲಿ ಸಸಿಗಳು ವಿತರಣೆಯಾಗಬೇಕು. ಈ ಬಗ್ಗೆ ಅಧಿಕಾರಿಗಳು ಯೋಚಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಿವಶಂಕರ್ ಕುಂಟೆ ಮತ್ತು ಲಕ್ಷ್ಮಣ ಗೌಡ ಒತ್ತಾಯಿಸಿದರು.
ಫಲಿತಾಂಶ ಕುಸಿತ: ಜಿಲ್ಲೆಯಲ್ಲಿ ಹತ್ತನೇ ತರಗತಿ ಫಲಿತಾಂಶ ನಿರಾಶಾದಾಯಕವಾಗಿದ್ದು, 2012 ರಲ್ಲಿ ರಾಜ್ಯದಲ್ಲಿ 3 ನೇ ಸ್ಥಾನದಲ್ಲಿದ್ದ ಹಾಸನ 2013 ರಲ್ಲಿ 5 ನೇ ಸ್ಥಾನ ಹಾಗೂ 2014 ರಲ್ಲಿ 14 ನೇ ಸ್ಥಾನಕ್ಕೆ ತಳ್ಳಲ್ಪಟ್ಟದೆ. ಇದಕ್ಕೆ ಕಾರಣವೇನು, ಯಾವುದಾದರೂ ಕೊರತೆಗಳಿವೆಯೇ ಅಥವಾ ಬೋಧನೆಯಲ್ಲಿ ಹಿಂದೆ ಬಿದ್ದಿದ್ದೇವೆಯೇ, ಇದಕ್ಕೆ ಯಾರು ಹೊಣೆ ಎಂದು ಜಿಲ್ಲಾ ಪಂಚಾಯಿತಿ ಹಂಗಾಮಿ ಅಧ್ಯಕ್ಷ ಕುಂಟೆ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆ ಅಧಿಕಾರಿ ಪುಟ್ಟಸ್ವಾಮಿ, ಕಳೆದ ಬಾರಿಯ ಫಲಿತಾಂಶಗಳಿಗಿಂತ ಈ ವರ್ಷ ಶೇ.0.46 ರಷ್ಟು ಕಡಿಮೆ ಬಂದಿದ್ದು, ಖಾಸಗಿ ಹಾಗೂ ಅನುದಾನಿತ ಶಾಲೆಗಳಲ್ಲಿಯ ಫಲಿತಾಂಶದಲ್ಲಿನ ಹಿನ್ನಡೆಯೂ ಇದಕ್ಕೆ ಕಾರಣ. ಈ ಬಾರಿ ಫಲಿತಾಂಶ ಸುಧಾರಣೆಗೆ ಹೆಚ್ಚಿನ ಕ್ರಮವಹಿಸಲಾಗುವುದು ಎಂದರು.
ಅಧಿಕಾರಿಗಳಿಗೆ ಸೂಚನೆ: ನ್ಯಾಯಾ ಬೆಲೆ ಅಂಗಡಿಗಳಲ್ಲಿ ಪ್ರದರ್ಶನ ಫಲಕ ಹಾಕಬೇಕು. ಬಾಲಕಾರ್ಮಿಕರ ಪತ್ತೆಗೆ ಹೆಚ್ಚು ಕಾರ್ಯಾಚರಣೆ ನಡೆಸಬೇಕು. ಉದ್ಯೋಗ ಖಾತರಿ ಯೋಜನೆ ಹಾಗೂ ನಿರ್ಮಲ ಭಾರತ ಅಭಿಯಾನದ ಹಣ ಬಳಸಿ ಹಳ್ಳಿಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಶೌಚಾಲಯ ನಿರ್ಮಾಣವಾಗಬೇಕು, ಫಲಾನುಭವಿಗಳಿಗೆ ಶೀಘ್ರವಾಗಿ ಕೊಳವೆ ಬಾವಿ ಕೊರೆದು ನೀರು ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಯು.ಪಿ.ಸಿಂಗ್ ಮಾತನಾಡಿ, ಎಲ್ಲಾ ಅಧಿಕಾರಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಪ್ರಗತಿ ಕೇವಲ ಅಂಕಿಅಂಶಗಳಲ್ಲಷ್ಟೇ ಇರದೆ ಇದು ಗೋಚರವಾಗಬೇಕು. ಆ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದರು.