ಕೊಬ್ಬರಿ ಬೆಲೆ ಚೇತರಿಕೆ: ರೈತರಲ್ಲಿ ಮಂದಹಾಸ
ಕ.ಪ್ರ.ವಾರ್ತೆ ಚ ಅರಸೀಕೆರೆ ಚ ಜೂ. 18
ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ ಎರಡು ವಾರಗಳಿಂದ ಕೊಬ್ಬರಿ ಬೆಲೆಯ ಏರಿಳಿತಕ್ಕೆ ನಿರಾಸೆ ಹೊಂದಿದ್ದ ತೆಂಗು ಬೆಳೆಗಾರರು ಮಂಗಳವಾರ ನಡೆದ ಹರಾಜಿನಲ್ಲಿ ಕ್ವಿಂಟಲ್‌ಗೆ 13,600 ರು.ವರೆಗೆ ಮಾರಾಟವಾಗಿದ್ದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತು.
ಕಳೆದ ಏ. 4ರ ಶುಕ್ರವಾರ ನಡೆದ ಕೊಬ್ಬರಿ ಹರಾಜು ಪ್ರಕ್ರಿಯೆಯಲ್ಲಿ ಪ್ರತಿ ಕ್ವಿಂಟಲ್ ಕೊಬ್ಬರಿ 11,700 ರು.ಗೆ ಟೆಂಡರ್ ನೆಡೆದಿದ್ದು, ತದನಂತರ ಮೇ. 16ರ ಶುಕ್ರವಾರ ನಡೆದ ಹರಾಜುನಲ್ಲಿ ಪ್ರತಿ ಕ್ವಿಂಟಲ್‌ಗೆ 11.100 ರಿಂದ 12.025 ರು.ಗೆ ಹರಾಜಾಗಿತ್ತು. ಮೇ.20 ರ ಮಂಗಳವಾರ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಕ್ವಿಂಟಲ್ ಕೊಬ್ಬರಿಗೆ ಗರಿಷ್ಟ ಬೆಲೆ 13,800 ರು.ಗೆ ತದನಂತರ 14,100 ರು.ಗೆ ಮಾರಾಟವಾಗಿ ಆಶ್ಚರ್ಯ ವನ್ನು ಸೃಷ್ಟಿಸಿತ್ತು.
ಬೆಲೆಯಲ್ಲಿ ಏರಿಳಿತ: ಇತ್ತೀಚಿನ ಮಾರುಕಟ್ಟೆಯ ಹರಾಜಿನಲ್ಲಿ ಕೊಬ್ಬರಿಗೆ ಪ್ರತಿ ಕ್ವಿಂಟಲ್‌ಗೆ ಸುಮಾರು 2,000 ರು.ನಿಂದ 2,500 ರು. ಬೆಲೆಯಲ್ಲಿ ಏರಿಳಿತ ಉಂಟಾಗಿತ್ತು. ಇದಕ್ಕೆ ಕಾರಣ ಕೇರಳ ರಾಜ್ಯದಿಂದ ತೆಂಗಿನಕಾಯಿಯನ್ನು ಒಣಗಿಸಿ ಮಾಡಿದ ಕೊಬ್ಬರಿ ಬೇರೆ ಬೇರೆ ರಾಜ್ಯಗಳ ಕೃಷಿ ಮಾರುಕಟ್ಟೆಗೆ ಲಗ್ಗೆ ಹಾಕಿರುವ ಕಾರಣ ಕರ್ನಾಟಕ ರಾಜ್ಯದ ನೈಜ ಒಣ ಕೊಬ್ಬರಿಗೆ ಮಾರುಕಟ್ಟೆ ಯಲ್ಲಿ ಸೂಕ್ತ ಬೆಲೆ ಇಲ್ಲದಾಗಿದೆ ಎನ್ನುವುದು ಇಲ್ಲಿನ ಕೆಲವು ವರ್ತಕರ ಅಭಿಪ್ರಾಯವಾಗಿದೆ. ರೈತರು ಬೆಲೆಯ ಆಸೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಕೊಬ್ಬರಿ ತಂದಾಗ ಎಲ್ಲರೂ ಸೇರಿ ಟೆಂಡರ್ ಪ್ರಕ್ರಿಯಲ್ಲಿ ಕಡಿಮೆ ಹರಾಜಿಗೆ ಬೆಲೆಯನ್ನು ನಿಗದಿ ಮಾಡುತ್ತಾರೆ, ರೈತರು ತಾವು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಕೊಬ್ಬರಿ ಮಾರಾಟ ಮಾಡಿಕೊಂಡು ಕೈ ತೊಳೆದು ಕೊಳ್ಳುತ್ತಾರೆ ಎಂದು ದೂರುತ್ತಾರೆ.
ಹಳೇ ಕೊಬ್ಬರಿಗೆ ಬೆಲೆ: ಕಳೆದ ಮೂರು ನಾಲ್ಕು ವರ್ಷಗಳ ಹಿಂದೆ ಸಂಗ್ರಹಣೆ ಮಾಡಿಟ್ಟಿರುವ ಕೊಬ್ಬರಿಗಳು ಮಾತ್ರ ಈಗ ಮಾರುಕಟ್ಟೆಗೆ ಬರುತ್ತಿದ್ದು, ಕನಿಷ್ಠ ಬೆಲೆಯು 11.800 ರು.ನಿಂದ ಪ್ರಾರಂಭವಾಗಿ ಗರಿಷ್ಠ ಬೆಲೆಯು 13.800 ರು.ಗೆ ನಿಲ್ಲುವಂತಾಗಿದೆ. ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಪ್ರತಿಕ್ರಿಯೆ ನೀಡಿ, ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ವರ್ತಕರ ಬೇಡಿಕೆಗೆ ತಕ್ಕಂತೆ ಕೊಬ್ಬರಿ ಬಾರದೆ ಇರುವುದು ದಿಢೀರ್ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿತ್ತು ಎಂದರು.
ತೆಂಗಿನ ಮರಗಳಿಗೆ ತಗುಲಿರುವ ರೋಗಗಳಿಂದ ಇಳುವರಿ ಕುಂಠಿತವಾಗಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ಕೊಬ್ಬರಿಗೆ ರವಾನೆ ಆಗದಿದ್ದರೇ ದಿಢೀರ್ ಬೆಲೆ ಹೆಚ್ಚಾಗುತ್ತದೆ. ಅಂತೆಯೇ ಬೇರೆ ಬೇರೆ ರಾಜ್ಯಗಳಿಂದ ಮಾರುಕಟ್ಟೆಗೆ ಕೊಬ್ಬರಿ ಪ್ರವೇಶಿಸಿದರೆ ಕೂಡ ದಿಢೀರ್ ಬೆಲೆಯಲ್ಲಿ ಕುಸಿತ ಉಂಟಾಗುತ್ತದೆ ಎಂದು ಅವರು ಹೇಳಿದರು.