ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪಾರದರ್ಶಕ ಆಡಳಿತಕ್ಕೆ ಸಹಕಾರ ಅಗತ್ಯ

Mainashree
Updated On : 18 Jun 2014, 9:03 am

ಕ.ಪ್ರ. ವಾರ್ತೆ ಚ ಹೊಳೆನರಸೀಪುರ ಚ ಜೂ 18
ಪೊಲೀಸ್ ಇಲಾಖೆಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಪಾರದರ್ಶಕ ಆಡಳಿತ ನೀತಿಯ ಅಳವಡಿಕೆಗೆ ಸಾರ್ವಜನಿಕರೂ ಮುಕ್ತವಾಗಿ ಸಹಕಾರ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಇಲ್ಲಿ ಕೋರಿದರು.
 ಪಟ್ಟಣದಲ್ಲಿನ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ನಡೆದ ಸಾರ್ವಜನಿಕ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಹಾಗೂ ಪೊಲೀಸ್ ಇಲಾಖೆಯಿಂದ ಕೈಗೊಳ್ಳಬಹುದಾದ ಕಾರ್ಯಗಳ ಕುರಿತಂತೆ ಸಲಹೆ ಸೂಚನೆಗಳನ್ನು ಆಲಿಸಿದ ನಂತರ ಮಾತನಾಡಿದ ಅವರು, ಮಾಡಿರುವ ಕೆಲಸಗಳು ಒಂದಿಷ್ಟು, ಆದರೆ ಮಾಡಬೇಕಾದ ಕೆಲಸಗಳು ಬಹಳಷ್ಟು ಎಂಬ ನಿಟ್ಟಿನಲ್ಲಿ ಪೊಲೀಸರು ಕಾರ್ಯ ನಿರ್ವಹಿಸಬೇಕಾದ ಅವಶ್ಯಕತೆ ಇದ್ದು, ಇದರಲ್ಲಿ ಸಾರ್ವಜನಿಕರ ಪಾತ್ರ ಹಾಗೂ ಸಹಕಾರ ಕೂಡ ಅತಿ ಮುಖ್ಯವಾಗಿದೆ ಎಂದರು.
ಅಪಘಾತ ಸಂಖ್ಯೆ ಹೆಚ್ಚಳ: ಜಿಲ್ಲೆಯಲ್ಲಿ ಕೊಲೆಗಳಂತಹ ಅಪರಾಧ ಕೃತ್ಯಗಳಲ್ಲಿ ಸಾಯುವವರಿಗಿಂತಲೂ ರಸ್ತೆ ಅಪಘಾತಗಳಲ್ಲಿಯೇ ಮರಣ ಹೊಂದುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ವಾಹನ ಚಾಲನೆಯ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತಂತೆ ಸಾಕಷ್ಟು ಮಾಹಿತಿಗಳನ್ನು ನೀಡಿದ್ದರೂ ಅತಿವೇಗ ಹಾಗೂ ಅಜಾಗರೂಕತೆಯ ಪರಿಣಾಮವಾಗಿ ಅಪಘಾತಗಳು ಹಾಗೂ ಸಾವು ನೋವಿನ ಸಂಖ್ಯೆಯು ಹೆಚ್ಚಲು ಕಾರಣವಾಗಿದೆ ಎಂದರು.
 ಜಿಲ್ಲೆಯಲ್ಲಿನ ಪ್ರತಿ ಪೊಲೀಸ್ ಠಾಣೆಗಳಿಗೂ ಕೆಲವೇ ದಿನಗಳಲ್ಲಿ ಸುಗಮ ಸಂಚಾರ ವ್ಯವಸ್ಥೆ ಹಾಗೂ ಪಾರ್ಕಿಂಗ್ ಸಮಸ್ಯೆಯ ಪರಿಹಾರಕ್ಕಾಗಿ ಬ್ಯಾರಿಕೇಡ್‌ಗಳು ಅತಿವೇಗದ ಚಾಲನೆಯನ್ನು ಗುರುತಿಸಲು ಸ್ಪೀಡೋ ಮೀಟರ್, ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ತಡೆಗಟ್ಟಲು ಆಲ್ಕೋಮೀಟರ್ ಹಾಗೂ ಪ್ರತಿ  ಠಾಣೆಗೂ ವಾಹನಗಳ ಪಾರ್ಕಿಂಗ್ ಫಲಕಗಳನ್ನು ಕಾನೂನು ಸುವ್ಯವಸ್ಥೆಯ ಸಲುವಾಗಿ ನೀಡಲಾಗುತ್ತಿದೆ ಎಂದು ಅವರು, ಜುಲೈ ಮೊದಲ ವಾರದಲ್ಲಿ ರಸ್ತೆ ಸುರಕ್ಷತೆಗಾಗಿ ಕಾಲೇಜಿನ ವಿದ್ಯಾರ್ಥ್ಥಿಗಳ ಸಂಘವನ್ನು ಆರಂಭಿಸಲಾಗುವುದು ಎಂದರು.
ಸಂಚಾರಕ್ಕೆ ತೊಂದರೆ: ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಪಟ್ಟಣದಲ್ಲಿ ಹಾಸನ-ಮೈಸೂರು ರಸ್ತೆಯಲ್ಲಿನ ರಾಜ್ಯ ಹೆದ್ದಾರಿಯುದ್ದಕ್ಕೂ ಗ್ಯಾರೇಜ್‌ಗಳು, ಕೋಳಿ ಅಂಗಡಿಗಳು, ಹಾಗೂ ಮೆಕ್ಯಾನಿಕ್ ಅಂಗಡಿಗಳ ಹಾವಳಿಯಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗಿದ್ದು ಕೂಡಲೇ ಈ ಸಮಸ್ಯೆಯನ್ನು ಸರಿಪಡಿಸುವಲ್ಲಿ ಮುಂದಾಗಬೇಕೆಂದರು. ಅಲ್ಲದೇ ಕೋಟೆ ಮುಖ್ಯರಸ್ತೆಯಲ್ಲಿನ ವಾಣಿಜ್ಯ ಮಳಿಗೆಗಳನ್ನು ಕೆಲವರು ಅತಿಕ್ರಮವಾಗಿ ತೆರೆದು ಬಳಕೆ ಮಾಡುತ್ತಿರುವುದನ್ನು ಕೂಡಲೇ ತಡೆಗಟ್ಟಬೇಕೆಂದು ಸಾರ್ವಜನಿಕರು ಕೋರಿದರು.
 ಪಟ್ಟಣದಲ್ಲಿನ ಪೇಟೆಮುಖ್ಯ ರಸ್ತೆಯನ್ನು ಸಂಚಾರದ ದೃಷ್ಟಿಯಿಂದ ಏಕಮುಖ ಸಂಚಾರಿ ವ್ಯವಸ್ಥೆಗೊಳಿಸಿಕೊಟ್ಟು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನಾಗರಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಕೋರಿದರು.
 ಈ ಸಂದರ್ಭದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಕೃಷ್ಣಪ್ಪ, ನಗರ ಠಾಣೆ ಎಸ್‌ಐ ಶಿವಕುಮಾರ್, ಗ್ರಾಮಾಂತರ ಠಾಣೆ ಎಸೈ ಲೋಕೇಶ್, ಕ್ರೈಮ್ ಎಸೈ, ಪುರಸಭೆ ಮುಖ್ಯಾಧಿಕಾರಿ ಹರೀಶ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement