ಸಫಾಯಿ ಕರ್ಮಚಾರಿ ಮಕ್ಕಳಿಗೆ ಖಾಸಗಿ ಶಾಲೆ ಪ್ರವೇಶ ಕಲ್ಪಿಸಲು ಆಗ್ರಹ
ಮೈಸೂರು: ಸಫಾಯಿ ಕರ್ಮಚಾರಿ ಮಕ್ಕಳಿಗೆ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶಾವಕಾಶ ನೀಡಬೇಕು ಎಂದು ಸಫಾಯಿ ಕರ್ಮಚಾರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ವಿ. ವೆಂಕಟೇಶ್ ಆಗ್ರಹಿಸಿದ್ದಾರೆ. ನಮ್ಮ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ. ಈಗಿನ ಪೀಳಿಗೆಯೂ ಸಹ ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಅವಲಂಬಿತರಾಗಿದ್ದಾರೆ. ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ಸ್ವಚ್ಛ ನಿರ್ವಹಣೆ ಮಾಡುವ ಕಾರ್ಮಿಕ ಮಕ್ಕಳಿಗೂ ಅದೇ ಶಾಲೆಗಳಲ್ಲಿ ಪ್ರವೇಶಾತಿ ಲಭಿಸುತ್ತಿಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಮ್ಮ ಮಕ್ಕಳಿಗೆ ಶಾಲೆಗೆ ಪ್ರವೇಶಾತಿ ನೀಡದಿದ್ದರೆ ಸಂಬಂಧಿಸಿದ ಶಾಲೆಯ ಒಳಚರಂಡಿ ಪೈಪ್ಲೈನ್ ಮುಚ್ಚುವ ಮೂಲಕ ಮತ್ತು ಕಸದ ರಾಶಿ ಸುರಿಯುವ ಮೂಲಕ ನಮ್ಮ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಆರ್ಟಿಇ ಅಡಿ ಅರ್ಜಿ ಸಲ್ಲಿಸಿದರೆ ನಮ್ಮ ಮಕ್ಕಳ ಹೆಸರು ಲಾಟರಿ ಮೂಲಕ ಆಯ್ಕೆ ಮಾಡುವಾಗ ಬರುವುದಿಲ್ಲ. ಆದ್ದರಿಂದ ಶೇ. 25 ರಷ್ಟು ಮೀಸಲಾತಿಯಲ್ಲಿ, ಶೇ. 5 ರಷ್ಟನ್ನು ಸಫಾಯಿ ಕರ್ಮಚಾರಿ ಮಕ್ಕಳಿಗೆ ನೀಡಬೇಕು ಎಂದು ಆಗ್ರಹಿಸಿದರು.