ಹಣ ವಾಪಸ್ಗೆ ಗ್ರಾಹಕರ ಆಗ್ರಹ
ಹಾಸನ: ಗ್ರಾಹಕರಿಂದ ಹಣ ಪಡೆದ ಹಿಂದುಸ್ತಾನ್ ಇನ್ಪ್ರೋಕಾನ್ಸ್ ಸಂಸ್ಥೆಯು ಈಗ ಗ್ರಾಹಕರಿಗೆ ಹಣ ಹಿಂದಿರುಗಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಗ್ರಾಹಕರು ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಆರ್.ಸಿ. ರಸ್ತೆಯಲ್ಲಿರುವ ಈ ಸಂಸ್ಥೆಯು ಏಜೆಂಟರ ಮೂಲಕ ಹಣ ಕಟ್ಟಿಸಿಕೊಂಡು ಈಗ ಕಾಲಾವಧಿ ಮುಗಿದರೂ ಗ್ರಾಹಕರಿಗೆ ಹಣ ಹಿಂದಿರುಗಿಸದೇ ವಿಳಂಬ ಮಾಡುತ್ತಿದ್ದಾರೆ.
ಕಳೆದ ಸೋಮವಾರ ಈ ವಿರುದ್ಧ ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಗ್ರಾಹಕರಿಗೆ ಹಣ ನೀಡುವುದಾಗಿ ಸಂಸ್ಥೆಯವರು ಭರವಸೆ ನೀಡಿದ್ದರು. ಅದರಂತೆ ಬೆಳಗ್ಗೆ ಸಂಸ್ಥೆಗೆ ಹೋಗಿ ಹಣ ಕೇಳಿದರೆ ಮತ್ತೆ ವಿಳಂಬ ಮಾಡಿದ್ದರು ಎಂದು ಆರೋಪಿಸಿದರು.
ಕಾಲಹರಣ: ಹಿಂದೆ ಗ್ರಾಹಕರಿಗೆ ನೀಡಬೇಕಾದ ಹಣಕ್ಕೆ ಕೆಲವರಿಗೆ ಚೆಕ್ ನೀಡಿದ್ದರು. ಬ್ಯಾಂಕಿಗೆ ಹೋದರೇ ಹಣ ಇಲ್ಲ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಕಂಪನಿಗೆ ಬಂದು ವಿಚಾರಿಸಿದಾಗ ಬೇರೆ ಚೆಕ್ ನೀಡುವುದಾಗಿ ಹೇಳುತ್ತಿದ್ದಾರೆ. ಹಾಗಾಗಿ ಕಳೆದ 6-7 ತಿಂಗಳು ಹಣ ನೀಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಈಗ ಸಾರ್ವಜನಿಕರಿಗೆ ರು. 68 ಲಕ್ಷ ರು.ಗಳ ಸಾರ್ವಜನಿಕರ ಹಣ ಮೆಚುರಿಟಿ ಆಗಿದೆ. ಅದರಂತೆ ಹಣ ಕೇಳಿದರೆ ಮೀನಮೇಷ ಎಣಿಸುತ್ತಿದ್ದು, ಹಣ ನೀಡುವಂತೆ ಗ್ರಾಹಕರು ಪಟ್ಟು ಹಿಡಿದಿದ್ದರಿಂದ ಬೆಳಗ್ಗೆ 10 ಲಕ್ಷ ಕೊಡಿಸಲಾಯಿತು.
ಹಣ ಕಳೆದುಕೊಂಡಿದ ಸಾಕಷ್ಟು ಗ್ರಾಹಕರು ಬೆಳಗ್ಗೆ ಹಣ ಪಡೆಯಲು ಕಂಪನಿಗೆ ಬಂದಿದ್ದರಿಂದ ಕೆಲ ಕಾಲ ನೂಕುನುಗ್ಗಲು ಉಂಟಾಯಿತು.
ಕಂಪನಿ ಭರವಸೆ...
ಗ್ರಾಹಕರು ಕಟ್ಟಿದ ಹಣದ ಕಾಲಾವಧಿ ಮುಗಿದ ಒಟ್ಟು ರು. 68 ಲಕ್ಷ ನೀಡಬೇಕಾಗಿದ್ದು, ಇಂದು 10 ಲಕ್ಷ ರು.ಗಳನ್ನು ಮಾತ್ರ ನೀಡಲಾಗಿದೆ. ನಮ್ಮ ಕಂಪನಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿರುವುದರಿಂದ ಗ್ರಾಹಕರ ಹಣವನ್ನೇಲ್ಲಾ ಭೂಮಿ ಕೊಳ್ಳಲು ವಿನಿಯೋಗಿಸಲಾಗಿದೆ. ಈಗಾಗಲೇ ಜಮೀನು ಖರೀದಿ ಮಾಡಿದ್ದು, ಮಾರಾಟವಾದ ಕೂಡಲೇ ಹಣ ನೀಡಲಾಗುವುದು. ಇನ್ನು ಮೂರು ತಿಂಗಳ ಒಳಗೆ ಗ್ರಾಹಕರ ಉಳಿದ ಹಣವನೆಲ್ಲಾ ಹಿಂದಿರುಗಿಸುವುದಾಗಿ ಹಿಂದುಸ್ತಾನ್ ಇನ್ಪ್ರೋಕಾನ್ ಕಂಪನಿ ಶಾಕಾ ವ್ಯವಸ್ಥಾಪಕಿ ಸವಿತ ರಾಣಿ ಭರವಸೆ ನೀಡಿದರು.