ವರಾಂಡದಲ್ಲಿ ಪಾಠ!
ಹೊಳೆನರಸೀಪುರ: ಪಾಠ ಮಾಡಲು ಕೊಠಡಿಯೇ ಇಲ್ಲದೇ ಜಗುಲಿಯ ಮೇಲೆ ಪಾಠ ಮಾಡಬೇಕಾದ ಅನಿವಾರ್ಯತೆ...
ಇದು ತಾಲೂಕಿನ ಯಾವುದೋ ಗಡಿ ಗ್ರಾಮದ ಪ್ರಾಥಮಿಕ ಅಥವಾ ಪ್ರೌಢಶಾಲೆಯ ಕಥೆಯೂ ಅಲ್ಲ. ಇದು ಪಟ್ಟಣದ ಹೃದಯ ಭಾಗದಲ್ಲಿನ ತಾಲೂಕು ಕಚೇರಿಯ ಪಕ್ಕದಲ್ಲಿಯೇ ಇರುವ ಹೊಸ ಬಾಲಕಿಯರ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯರ ಕಥ ಮತ್ತು ವ್ಯಥೆ.
ಸೌಲಭ್ಯಗಳೇ ಇಲ್ಲ: ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರ ಹತ್ತು ಹಲವು ಯೋಜನೆಗಳನ್ನು ರೂಪಿಸಿದರೂ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕಾದಲ್ಲಿನ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳ ನಿರ್ಲಕ್ಷವೋ ಅಥವಾ ತಾತ್ಸಾರವೋ ಏನೋ, 2006ರಲ್ಲಿ ಆರಂಭಗೊಂಡರೂ ಈ ಕಾಲೇಜು ಮೂಲಭೂತ ಸೌಕರ್ಯಗಳನ್ನೇ ಕಾಣದೆ, ಇಂದಿಗೂ ಸ್ವಂತ ಕಟ್ಟಡವಿಲ್ಲದೇ ವಿದ್ಯಾರ್ಥಿನಿಯರನ್ನು ಜಗುಲಿಯ ಮೇಲೆ ಕೂರಿಸಿ ಪಾಠ ಮಾಡಬೇಕಾದ ಅನಿವಾರ್ಯತೆ ಇಲ್ಲಿದೆ.
223 ವಿದ್ಯಾರ್ಥಿನಿಯರು: ಇಲ್ಲಿನ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ಕಲಾ ವಿಭಾಗದಲ್ಲಿ-55, ವಾಣಿಜ್ಯ ವಿಭಾಗದಲ್ಲಿ-50 ಹಾಗೂ ವಿಜ್ಞಾನ ವಿಭಾಗದಲ್ಲಿ-35ವಿದ್ಯಾರ್ಥಿನಿಯರು ದಾಖಲಾಗಿದ್ದಾರೆ. ದ್ವಿತೀಯ ವರ್ಷದಲ್ಲಿ ಕಲಾ ವಿಭಾಗದಲ್ಲಿ-40, ವಾಣಿಜ್ಯ ವಿಭಾಗದಲ್ಲಿ-30 ಮತ್ತು ವಿಜ್ಞಾನ ವಿಭಾಗದಲ್ಲಿ-13ವಿದ್ಯಾರ್ಥಿನಿಯರೂ ಸೇರಿ ಒಟ್ಟು 223 ವಿದ್ಯಾರ್ಥಿನಿಯರಿದ್ದಾರೆ.
ಕಾಲೇಜಿನಲ್ಲಿ ಹತ್ತು ಹಲವು ಕೊರತೆಗಳಿದ್ದರೂ ಅವಶ್ಯಕವಿರುವಷ್ಟು ಉಪನ್ಯಾಸಕರ ಲಭ್ಯತೆ ಇದ್ದು, ಈ ಕಾಲೇಜು ಪ್ರಸಕ್ತ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶೇ.93ರಷ್ಟು ಫಲಿತಾಂಶವನ್ನು ಗಳಿಸಲು ಶಕ್ತವಾಗಿದೆ. ಈ ಕಾಲೇಜು ಆರಂಭದಿಂದಲೂ ಪಟ್ಟಣದ ಹೃದಯ ಭಾಗದಲ್ಲಿರುವ ವಹಾತ್ಮಗಾಂಧಿ ಉದ್ಯಾನವನದ ಹಿಂಬಾಗದಲ್ಲಿರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ನಂತರದಲ್ಲಿ ಪಕ್ಕದಲ್ಲಿನ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದಲ್ಲಿನ ಕೆಲ ಕೊಠಡಿಗಳಲ್ಲಿ ಪಾಠ ಪ್ರವಚನಗಳು ನಡೆಯುತ್ತಿದ್ದವು.
ಕೊಠಡಿಗಳದ್ದೇ ಸಮಸ್ಯೆ: ಆದರೆ ಕಾಲೇಜು ಆರಂಭಗೊಂಡು 9 ವರ್ಷಗಳಾಗುತ್ತಾ ಬಂದರೂ ಇದುವರೆವಿಗೂ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಲು ಈ ಕಾಲೇಜು ಶಕ್ತವಾಗಿಲ್ಲದಿರುವುದು ದುರಾದೃಷ್ಟಕರ. ಈ ಕಾಲೇಜಿಗೆ ದಾಖಲಾಗಲು ವಿದ್ಯಾರ್ಥಿನಿಯರೇನೋ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದರೆ ಕೊಠಡಿಗಳದ್ದೇ ಸಮಸ್ಯೆ. ಇರುವ ಕೊಠಡಿಗಳ ಛಾವಣಿ ಈಗಾಗಲೇ ಕುಸಿಯುತ್ತಿದೆ. ಪ್ರಯೋಗಾಲಯ ಇಲ್ಲ, ಕಚೇರಿ ಮತ್ತು ಉಪನ್ಯಾಸಕರಿಗೆ ಪ್ರತ್ಯೇಕ ಕೊಠಡಿಯಿಲ್ಲ. ಹೀಗೆ ಇಲ್ಲಗಳ ನಡುವೆಯೇ ಇಲ್ಲಿನ ಉಪನ್ಯಾಸಕರು ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ.
ಅಲ್ಲದೇ ಈ ಕಾಲೇಜು ತರಕಾರಿ ಮಾರುಕಟ್ಟೆ, ಚಿತ್ರಮಂದಿರ, ತಾಲೂಕು ಕಚೇರಿ ಹಾಗು ಜನನಿಬಿಡ ಪ್ರದೇಶದ ಮಧ್ಯದಲ್ಲಿರುವ ಕಾರಣದಿಂದಾಗಿ ಪಾಠ-ಪ್ರವಚನಗಳಿಗೆ ನಿತ್ಯವೂ ಕಿರಿ-ಕಿರಿ ಅನುಭವಿಸಬೇಕಾದ ಅನಿವಾರ್ಯತೆ ಇಲ್ಲಿನ ವಿದ್ಯಾರ್ಥಿನಿಯರದ್ದಾಗಿದೆ.
ಕ್ರಮಕ್ಕೆ ಮನವಿ: ಈಗಲಾದರೂ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಕಾಲೇಜು ಶಿಕ್ಷಣ ಇಲಾಖೆ ಈ ಕಾಲೇಜಿಗೆ ಸೂಕ್ತ ಕಟ್ಟಡ ಹಾಗೂ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕಾರ ನೀಡಲಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಎಚ್.ಡಿ.ಗುರುಪ್ರಸಾದ್