ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕೃಷಿ ಉತ್ತೇಜನದಿಂದ ಆಹಾರ ಕೊರತೆ ಇಲ್ಲ

Vishwanath S
Updated On : 21 Jun 2014, 12:08 pm

ಕನ್ನಡಪ್ರಭ ವಾರ್ತೆ, ಹಾಸನ , ಜೂ. 20
ಜನಸಂಖ್ಯಾ ಸ್ಪೋಟದಿಂದ ಆಹಾರದ ಕೊರತೆ ಉಂಟಾಗಿ, ಇದನ್ನು ಸರಿದೂಗಿಸಲು ಕೃಷಿಗೆ ಉತ್ತೇಜನ ನೀಡಬೇಕಿದೆ.  ಈ ನಿಟ್ಟಿನಲ್ಲಿ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾಗಿದೆ ಎಂದು ಲೋಕೋಪಯಾಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇಲಾಖೆಗಳಾದ ಜಲಾನಯನ ಅಭಿವೃದ್ಧಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಕೃಷಿ ಮಾರುಕಟ್ಟೆ, ಸಾಮಾಜಿಕ ಅರಣ್ಯ, ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನಕೇಂದ್ರ, ಜೈವಿಕ ಇಂಧನ ಉದ್ಯಾನ, ಆಕಾಶವಾಣಿ, ವಾರ್ತಾ ಇಲಾಖೆ, ನಬಾರ್ಡ್, ಲೀಡ್ ಬ್ಯಾಂಕ್, ಜಿಲ್ಲಾ ಕೃಷಿಕ ಸಮಾಜ, ಜಿಲ್ಲಾ ಕೃಷಿ ಪರಿಕರಗಳ ಮಾರಾಟಗಾರರ, ವಿತರಕರ ಸಂಘ ಮತ್ತು ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣ, ಸೂಕ್ಷ್ಮ ನೀರಾವರಿ ಉಪಕರಣಗಳ ಸರಬರಾಜು ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಕೃಷಿ ಉತ್ಸವವನ್ನು ಉದ್ಘಾಟಿಸಿ, ಭಾರತ ಕೃಷಿ ಪ್ರಧಾನ ದೇಶ. ಶೇ. 20ರಷ್ಟು ಕೃಷಿ ಭೂಮಿಯಾಗಿದ್ದು, ಈ ಪೈಕಿ ಶೇ.80ರಷ್ಟು ಮಳೆ ಆಶ್ರಿತವಾಗಿದೆ.
ಸಮಸ್ಯೆ ಅರಿತಿದ್ದಾರೆ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಿರಿಯರಾಗಿದ್ದು, ಕೃಷಿಕರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದಾರೆ. ದೇಶಾದ್ಯಂತ ಸುತ್ತಿರುವಂತಹ ಗೌಡರು ಅನ್ನದಾನ ಬಗ್ಗೆ ಅಪಾರವಾದ ಮಾಹಿತಿ ಸಂಗ್ರಹಿಸಿದ್ದು, ರೈತರ ಕಷ್ಟ, ಸಮಸ್ಯೆಗಳನ್ನು ಅರಿತಿದ್ದಾರೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮಾತನಾಡಿ, ಹವಾಮಾನದ ವೈಪರೀತ್ಯದಿಂದ ಅಕಾಲಿಕ ಮಳೆ ಉಂಟಾಗಿ ರೈತರು ಕೃಷಿಯೊಂದಿಗೆ ಜೂಜಾಟವಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ರೈತರ ಸ್ಥಿತಿ ಚೆನ್ನಾಗಿಲ್ಲ. ಮಳೆ ಕಾಲ ಕಾಲಕ್ಕೆ ಬರೋದಿಲ್ಲ. ಬಂದಂತಹ ಮಳೆಯನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು. ಅದಕ್ಕಾಗಿ ನೀರಾವರಿ ಯೋಜನೆಗಳಿಗೆ ಹೆಚ್ಚು ಒತ್ತನ್ನು ನೀಡಬೇಕು ಎಂದು ಹೇಳಿದರು.
ನೀರಿನ ಸಮಸ್ಯೆ: ಈಗಾಗಾಗಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಬೆಂಗಳೂರು ನಗರಕ್ಕೆ ಕುಡಿಯುವ ನೀರಿಗಾಗಿ ಕೆಆರ್‌ಎಸ್‌ನಿಂದ 300 ಕ್ಯೂಸೆಕ್ ನೀರು ಮತ್ತು ಕಬಿನಿಯಿಂದ 300 ಕ್ಯೂಸೆಕ್ ನೀರನ್ನು ನೀಡಲಾಗುತ್ತಿದೆ. ಇನ್ನು ಜಿಲ್ಲೆಯಲ್ಲಿ ಡೆಡ್ ವಾಟರ್ ಕುಡಿಯುವ ಪರಿಸ್ಥಿತಿ ಬಂದೊದಗಿದೆ. ಆದ್ದರಿಂದ ನೀರಾವರಿಗೆ ಹೆಚ್ಚು ಒತ್ತನ್ನು ನೀಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಮಾಹಿತಿಯ ಕೈಪಿಡಿ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆಲೂರಿನ ಸೋಮಶೇಖರ್, ರೇಷ್ಮೆಯಲ್ಲಿ ಮಾದರಿ ಕೃಷಿಕರಾಗಿರುವ ಚನ್ನರಾಯಪಟ್ಟಣದ ಚಂದ್ರೇಗೌಡ, ತೋಟಗಾರಿಕೆಯಲ್ಲಿ ಮಾಯಗೌಡನಹಳ್ಳಿಯ ಭಗೀರತಮ್ಮ, ಹೈನುಗಾರಿಕೆಯಲ್ಲಿ ಕಂದಲಿಯ ವೆಂಕಟೇಗೌಡರನ್ನು ಸನ್ಮಾನಿ ಗೌರವಿಸಲಾಯಿತು.
  ಜೊತೆಗೆ ಕೃಷಿ ಪದವಿಯಲ್ಲಿ ಚಿನ್ನದ ಪದ ಪಡೆದ ವಿದ್ಯಾರ್ಥಿಗಳನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ಶಾಸಕ ಎ. ಮಂಜು, ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ಜಿಪಂ ಹಂಗಾಮಿ ಅಧ್ಯಕ್ಷ ಶಿವಶಂಕರ್ ಕುಂಟೆ, ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜು ಹಾಗೂ ಇತರರು ಇದ್ದರು.
ರಸ್ತೆ ಅಭಿವೃದ್ಧಿ
ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ರಸ್ತೆ  ಕಾಮಗಾರಿಗಳಿಗಾಗಿ 303 ಕೋಟಿ ರುಪಾಯಿ ವೆಚ್ಚ ಮಾಡುವ ಮೂಲಕ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಸುದ್ದಿಗಾರರಿಗೆ ತಿಳಿಸಿದರು.
  592.86 ಕಿಮೀ ರಾಜ್ಯ ಹೆದ್ದಾರಿಗಾಗಿ ರು. 195.12 ಕೋ, 418.93 ಕಿಮೀ ಜಿಲ್ಲೆಯ ರಸ್ತೆಗಳಿಗೆ 63.32 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟಾರೆಯಾಗಿ 258 ಕೋಟಿ ರು.ಗಳನ್ನು ಕಾಮಗಾರಿಗಳಿಗಾಗಿ ವೆಚ್ಚ ಮಾಡಿದ್ದು, ಉಳಿಕೆ 45 ಕೋಟಿ ರು. ರಸ್ತೆಗಳ ನಿರ್ವಹಣೆಗಾಗಿ ಬಳಲಾಗಿದೆ ಎಂದು ಹೇಳಿದರು. ಜಿಲ್ಲಾ ನ್ಯಾಯಾಲದ ನೂತನ ಕಟ್ಟಡಕ್ಕೆ 72 ಕೋಟಿ ಬಿಡುಗಡೆ ಮಾಡಿದ್ದು,  ಪಶು ವೈದ್ಯಕೀಯ ಕಾಲೇಜಿನ ಕಾಮಗಾರಿಗೆ 25 ಕೋಟಿ ಬಿಡುಗಡೆ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement