ಹಳಿಯೂರು ಮಾರಮ್ಮ ದೇಗುಲ ಮರು ಪ್ರತಿಷ್ಠೆ
ಹಾಸನ: ತಾಲೂಕಿನ ಹಳೇಕೋಟೆ ಹೋಬಳಿಗೆ ಸೇರಿದ ಮಾವಿನಕೆರೆ(ಕಾಮಸಮುದ್ರ) ಗ್ರಾಮದಲ್ಲಿನ ಶ್ರೀ ಹಳಿಯೂರು ಮಾರಮ್ಮ ದೇವಾಲಯದ ಪುನರ್ಪ್ರತಿಷ್ಠಾಪನೆ ಉದ್ಘಾಟನೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೆರವೇರಿಸಿದರು. ಹಳೆಯದಾಗಿದ್ದ ಶ್ರೀ ಹಳಿಯೂರು ಮಾರಮ್ಮ ದೇವಸ್ಥಾನವನ್ನು ಕಾವೇರಿ ನೀರಾವರಿ ನಿಗಮದ ವತಿಯಿಂದ ಸುಮಾರು 1.40 ಕೋಟಿ ರು. ವೆಚ್ಚದಲ್ಲಿ ಪುನರ್ ಪ್ರತಿಷ್ಠಾಪನೆ ಕಾಮಗಾರಿಯು ಕಳೆದೊಂದು ವರ್ಷದಿಂದಲೂ ಭರದಿಂದ ಸಾಗಿತ್ತು. ದೇವಾಲಯದ ಕಾಮಗಾರಿಗಳು ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಮಾಜಿ ಪ್ರಧಾನಿ, ಸಂಸದ ಎಚ್.ಡಿ. ದೇವೇಗೌಡರು ಉದ್ಘಾಟನೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಭಕ್ತರ ಶ್ರದ್ಧೆಗೆ ಅನುಗುಣವಾಗಿ ದೇವರು ಶ್ರೇಯಸ್ಸು ಹಾಗೂ ಏಳಿಗೆಯನ್ನು ನೀಡುತ್ತಾನೆ ಎಂಬುದಕ್ಕೆ ತಾನೇ ಸಾಕ್ಷಿಯಾಗಿದ್ದೇನೆ ಎಂದರಲ್ಲದೇ, ಇಲ್ಲಿನ 19 ಗ್ರಾಮಗಳ ಗ್ರಾಮಸ್ಥರಲ್ಲದೇ ಸಾವಿರಾರು ಜನರ ನಂಬುಗೆಯ ದೇವರಾದ ಶ್ರೀ ಹಳಿಯೂರು ಮಾರಮ್ಮ ಹಾಗೂ ಬೆಟ್ಟದ ರಂಗನಾಥ ಸ್ವಾಮಿಯನ್ನು ನಂಬಿ ಪೂಜಿಸಿದ ಫಲವಾಗಿ ತಮ್ಮ ಬದುಕಿನಲ್ಲಿ ಹಲವಾರು ಉನ್ನತಿಗಳು ಲಭ್ಯವಾಗಿದೆ ಎಂದು ಹೇಳುತ್ತಾ, ತಮ್ಮ ಬಾಲ್ಯದ ದಿನಗಳಲ್ಲಿ ಇಲ್ಲಿನ ದೇವಾಲಯ, ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ತಮ್ಮ ತಂದೆಯ ಹೆಗಲನ್ನೇರಿ ಹೋಗಿ ದೇವರ ದರ್ಶನ ಪಡೆದ ದಿನಗಳನ್ನು ಮೆಲುಕು ಹಾಕಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಶ್ರೀ ಹಳಿಯೂರು ಮಾರಮ್ಮ ದೇವಾಲಯದ ಪುನರ್ ಪ್ರತಿಷ್ಠಾಪನಾ ಕಾರ್ಯವು ಮುಗಿದಿದ್ದು ದೇವಾಲಯಕ್ಕೆ ಅಗತ್ಯವಾದ ಕುಡಿಯುವ ನೀರು, ಊಟದ ಹಾಲ್ಗಳನ್ನೂ ಕೂಡ ಆಧುನೀಕರಣಗೊಳಿಸಿ ಭಕ್ತಾದಿಗಳ ಸೌಲಭ್ಯಕ್ಕಾಗಿ ಕಡಿಮೆ ವೆಚ್ಚದಲ್ಲಿ ಸವಲತ್ತುಗಳು ದೊರೆಯುವಂತೆ ಸಹಕಾರ ನೀಡಲು 19 ಗ್ರಾಮಗಳ ಗ್ರಾಮದ ಮುಖಂಡರು ಚರ್ಚಿಸಿ ಸೂಕ್ತ ಬೆಲೆ ನಿಗಧಿಗೊಳಿಸಿ ಸವಲತ್ತುಗಳನ್ನು ನೀಡುವಂತೆ ಸೂಚಿಸಿದರು.
ವಿದಾನಪರಿಷತ್ ಸದಸ್ಯ ಪಟೇಲ್ ಶಿವರಾಮ್ ಮಾತನಾಡಿ, ಶಾಸಕ ಎಚ್.ಡಿ. ರೇವಣ್ಣ ಅವರು ತಮ್ಮ ರಾಜಕಾರಣದ ಆರಂಭದಿಂದಲೂ ತಮ್ಮ ತಂದೆಯವರ ರಾಜಕೀಯ ಶಕ್ತಿಗಳನ್ನು ಬಳಸಿಕೊಂಡು ಶಾಲಾ-ಕಾಲೇಜುಗಳನ್ನು ಕಟ್ಟಿಸುವುದೂ ಸೇರಿದಂತೆ ದೇವಾಲಯಗಳ ನಿರ್ಮಾಣಕ್ಕೂ ಅಗತ್ಯ ಸಹಕಾರಗಳನ್ನು ನೀಡುತ್ತಾ ಬಂದಿರುವುದು ಶ್ಲಾಘನೀಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ದೇವಾಲಯದ ಪುನರ್ನಿರ್ಮಾಣದಲ್ಲಿ ಸಹಕರಿಸಿದ ದೇವಾಲಯಕ್ಕೆ ಸಂಬಂಧಿಸಿದ 19ಗ್ರಾಮಗಳ ಮುಖಂಡರುಗಳನ್ನು ಹಾಗೂ ಕಾವೇರಿ ನೀರಾವರಿನಿಗಮದ ಸಂಬಂಧಿಸಿದ ಎಂಜಿನಿಯರ್ಗಳನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.