ಅಧಿಕಾರಿಗಳ ಕಾಲಹರಣ: ಆರೋಪ
ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎನ್.ರುದ್ರೇಶಗೌಡರು ಕ್ಷೇತ್ರದ ಆಡಳಿತವನ್ನು ಜಡ ವ್ಯವಸ್ಥೆಗೆ ತಂದು ಯಾವ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಪರ್ವತಯ್ಯ ವಾಗ್ದಾಳಿ ನಡೆಸಿದರು.
ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರು ಕ್ಷೇತ್ರದಲ್ಲಿ ಯಾವ ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ನೆಡೆಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.
ಕೆರೆ ಮಧ್ಯೆ ಕಾಮಗಾರಿ: ತಾಲೂಕಿನ ಹೆಬ್ಬಾಳು ಸರ್ಕಾರಿ ಫ್ರೌಡ ಶಾಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಭಾರಿ 10 ನೇ ತರಗತಿ ಫಲಿತಾಂಶ ಇಳಿಕೆಯಾಗಿದೆ. ಇಲ್ಲಿನ ಶಿಕ್ಷಕರಿಗೆ ಮತ್ತು ಮುಖ್ಯ ಶಿಕ್ಷಕರ ನಡುವೆ ಹೊಂದಾಣಿಕೆ ಇಲ್ಲ ಎಂದು ಸ್ಥಳೀಯ ಗ್ರಾಮಸ್ಥರ ದೂರು ನಮಗೆ ಬಂದಿದೆ. ಅಲ್ಲದೆ ಕೆರೆ ಮಧ್ಯೆ ಭಾಗದಲ್ಲಿ ಕಾಮಾಗಾರಿ ಕೆಲಸ ಮಾಡುವ ಅನಿವಾರ್ಯ ಏನು ಇದೆ. ತಕ್ಷಣ ಸಂಬಂಧ ಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಾಗಾರಿ ಸ್ಥಗೀತ ಮಾಡಬೇಕು ಎಂದರು.
ಅಧ್ಯಕ್ಷ ಶೋಭಾಮಣಿ ಗಿರೀಶ್ ಮಾತನಾಡಿ, ತಾಲೂಕಿನಲ್ಲಿ ಮುಂಗಾರು ವಿಳಂಬದಿಂದ ಕುಡಿಯುವ ನೀರಿಗೆ ಭಾರಿ ಪ್ರಮಾಣದ ಅಭಾವವಿದೆ, ಕೊಳವೆ ಬಾವಿ ತೆಗೆಸಿದ ಸರ್ಕಾರಿ ಮತ್ತು ಖಾಸಗಿ ವ್ಯಕ್ತಿಗಳು ಕೊಳವೆಬಾವಿಯಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ಮುಚ್ಚಬೇಕು, ಇಲ್ಲವಾದರೆ ಮುಂದಿನ ಅನಾಹುತ ಎದುರಿಸಬೇಕಾಗುತ್ತದೆ ಎಂದರು.
ಕಾಮಗಾರಿ ಸ್ಥಗಿತಕ್ಕೆ ಸೂಚನೆ: ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಬಿ.ಸುಂದ್ರೇಶ ಮಾತನಾಡಿ, ಹೆಬ್ಬಾಳು ಪ್ರೌಢಶಾಲೆಯಲ್ಲಿ ನಿರ್ಮಾಣವಾಗುತ್ತಿರುವ ಶಾಲಾ ಕಾಂಪೌಂಡ್ ಅವಾಜ್ಞಾನಿಕತೆಯಿಂದ ಕೂಡಿದೆ ಎಂದು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಕಾಮಗಾರಿ ನಿಲ್ಲಿಸುವಂತೆ ಮುಖ್ಯ ಶಿಕ್ಷರಿಗೆ ತಿಳಿಸಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ಕಮಲಮ್ಮ ಇದ್ದರು.